ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಮಾತ್ರ ಗೆಲುವು

ಪಕ್ಷೀಯರಿಗೆ ಶಾ ಎಚ್ಚರಿಕೆ

ಬೆಂಗಳೂರು : ಬಿಜೆಪಿ ಶಾಸಕರು, ಸಂಸದರು ಮತ್ತು ಪದಾಧಿಕಾರಿಗಳು ಮೊದಲು ಬೂತ್ ಮಟ್ಟದ ಗೆಲುವಿಗೆ ಶ್ರಮಿಸಬೇಕು. ಆಗ ತನ್ನಿಂದ ತಾನೇ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟಿನಲ್ಲಿ ಸಭೆ ಸೇರಿದ್ದ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕ್ಷೇತ್ರ ಉಸ್ತುವಾರಿ ಮುಖ್ಯಸರನ್ನುದ್ದೇಶಿಸಿ ಮಾತನಾಡಿದ ಶಾ, “ಚುನಾವಣೆಯಲ್ಲಿ ಗೆಲ್ಲಲು ಪಕ್ಷದ `ಸೂಕ್ಷ್ಮ ಆಡಳಿತ’ (ಮೈಕ್ರೋ ಮ್ಯಾನೇಜ್ಮೆಂಟ್) ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಪಕ್ಷದ ಕಾರ್ಯಕರ್ತರೊಬ್ಬರನ್ನು `ಪೇಜ್ ಪ್ರಮುಖ’ರಾಗಿ ಆಯ್ಕೆ ಮಾಡಬೇಕು” ಎಂದರು.

ಹಿಂದಿನ ಭೇಟಿ ವೇಳೆ ರಾಜ್ಯದ ಶಾಸಕರು ಮತ್ತು ಸಂಸದರಿಗೆ ನೀಡಲಾಗಿದ್ದ `ಒನ್-ಪ್ಲಸ್-ಒನ್ ಸ್ಟ್ರೆಟರ್ಜಿ’ಯಂತಹ ಕೆಲವು ಮಹತ್ವದ ನಿರ್ದೇಶನ ಇನ್ನೂ ಅನುಷ್ಠಾನಗೊಳಿಸದ ಬಗ್ಗೆ ಶಾ ತೀವ್ರ ಅಸಮಾಧಾನ ವ್ಯಕ್ತಪಡಿದರು. ಈ ರಣನೀತಿಯ ಪ್ರಕಾರ, ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿ ತನ್ನ ಕ್ಷೇತ್ರದ ಜೊತೆಗೆ ಪಕ್ಷ ಸೂಚಿಸಿದ ಮತ್ತೊಂದು ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಬೇಕು.

“ಚುನಾವಣೆ ಹತ್ತಿರ ಬಂದರೂ ಪಕ್ಷ ಸೂಚಿಸಿದ ಕೆಲಸ ಸಮರ್ಪಕ ಮಾಡಲು ಉದಾಸೀನ ಮಾಡುವುದೇಕೆ ? ನಿಮ್ಮ ಪಕ್ಷಕ್ಕಾಗಿ ಕೆಲಸ ಮಾಡಿ” ಎಂದರು.

ಜನವರಿ 16ರೊಳಗೆ ಕಾಂಗ್ರೆಸ್ ಸರ್ಕಾರದ ಕೊರತೆಗಳ ಬಗ್ಗೆ  ಕ್ಷೇತ್ರವಾರು `ಚಾರ್ಜ್‍ಶೀಟ್’ ತಯಾರಿಸಬೇಕು ಎಂದವರು ಗಡುವು ನೀಡಿದರು. ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಪಿಯೂಷ್ ಗೋಯಲ್ ಉಪಸ್ಥಿತರಿದ್ದರು. ಗೋಯಲ್ ರಾಜ್ಯ ಚುನಾವಣಾ ಉಸ್ತುವಾರಿ ಮುಖಂಡರಾಗಿ ಆಯ್ಕೆಯಾದರು.

ಮುಂದಿನ ಎರಡು ದಿನದೊಳಗೆ ಪಕ್ಷದ ಎಲ್ಲ ಮೋರ್ಚಾ ಅಧ್ಯಕ್ಷರು ಮತ್ತು ಜಿಲ್ಲಾ ಘಟಕಾಧ್ಯಕ್ಷರು ತಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿ ಒಪ್ಪಿಸಬೇಕೆಂದು ಶಾ ಸೂಚಿಸಿದರು.

“ಕೇವಲ ಸಭೆ ನಡೆಸಿದರೆ ಸಾಲದು. ನಿಮ್ಮ ಕೆಲಸ ಮತದಾರರನ್ನು ತಲುಪಬೇಕು. ಆದರೆ ರಾಜ್ಯದಲ್ಲಿ ಆ ಕಾರ್ಯ ನಡೆದಿಲ್ಲ. ಮೋರ್ಚಾಗಳು ಜನಸಾಮಾನ್ಯರ ಬಳಿ ಹೋಗಬೇಕು. ಇದಕ್ಕಾಗಿ ಯುದ್ದೋಪಾದಿಯಲ್ಲಿ ಕೆಲಸವಾಗಬೇಕು” ಎಂದು ಶಾ ಕಾರ್ಯಕರ್ತರನ್ನು ಹುರಿದುಂಬಿಸಿದರು.

 

LEAVE A REPLY