ಕಾರವಾರದ ಅಕ್ರಮ ಕಟ್ಟಡ ತೆರವುಗೊಳಿಸಿದ ನಗರಸಭೆ

ನಮ್ಮ ಪ್ರತಿನಿಧಿ ವರದಿ

ಕಾರವಾರ : ನಗರದ ಫುಟ್ಪಾತ್ ಅತಿಕ್ರಮಿಸಿಕೊಂಡು ಅಕ್ರಮ ಕಟ್ಟಡ ತೆರುವುಗೊಳಿಸುವ ಕಾರ್ಯಾಚರಣೆ ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಆಯುಕ್ತ ಎಸ್ ಯೋಗೀಶ್ವರ ನೇತೃತ್ವದಲ್ಲಿ ನಡೆಯಿತು.

ಮುಂಜಾನೆ 6.30 ಗಂಟೆ ಸುಮಾರಿಗೆ ನಗರಸಭೆಯ ಜೆಸಿಬಿ ಹಾಗೂ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗಿಳಿದ ಆಯುಕ್ತರು, ಡಾ ಪಿಕಳೆ ರಸ್ತೆಯಲ್ಲಿರುವ ಎಚ್ ಡಿ ಎಫ್ ಸಿ ಎಟಿಎಂ ಮತ್ತು ಗ್ರೀನ್ ಸ್ಟ್ರೀಟಿನಲ್ಲಿರುವ ತಾಜ್ ಫುಡ್ ಕಾರ್ನರ್ ಕಟ್ಟಡದ ಮುಂಭಾಗವನ್ನು ತೆರುವುಗೊಳಿಸಿದರು. ನಂತರ ಕೋಡಿಬಾಗದ ಅಕ್ರಮ ಕಟ್ಟಡ ತೆರುವುಗೊಳಿಸುವ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಯಿತು. ಈಗಾಗಲೇ ಅಕ್ರಮ ಕಟ್ಟಡ ಕಟ್ಟಿ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ನಗರದ ಡಾ ಪಿಕಳೆ ರಸ್ತೆಯಲ್ಲಿರುವ ಎರಡು ಕಟ್ಟಡಗಳ ಮಾಲಿಕರಿಗೆ ಸೇರಿದಂತೆ ಒಟ್ಟೂ 7 ಜನ ಅಪಾರ್ಟಮೆಂಟ್ ಮಾಲಿಕರಿಗೆ ನಗರಸಭೆಯು ನೋಟೀಸ್ ಜಾರಿ ಮಾಡಿದ್ದನ್ನು ಸ್ಮರಿಸಬಹುದು.

ಕೇವಲ ಕೆಡಿಎ ಅನುಮತಿ ಪಡೆದು ನಗರಸಭೆಯ ಪರವಾನಗಿ ಇಲ್ಲದೇ, ನಗರಸಭೆಗೆ ಒಂದೂ ಪೈಸೆ ಸಹ ತೆರಿಗೆ ಕಟ್ಟದೇ ವಾಣಿಜ್ಯ ವಹಿವಾಟು ಮಾಡುತ್ತಿರುವ ಬೃಹತ್ ಮಾಲ್ ನಡೆಯುತ್ತಿರುವ ಕಟ್ಟಡದ ಮಾಲಿಕರಿಗೆ ಸಹ ನಗರಸಭೆಯ ಪೌರಾಯುಕ್ತರು ಜಿಲ್ಲಾಧಿಕಾರಿ ಸೂಚನೆ ಪಡೆದು ನೋಟೀಸ್ ಜಾರಿ ಮಾಡಿ ದಿಟ್ಟ ಹೆಜ್ಜೆ ಇಟ್ಟಿದ್ದರು. ವಾಣಿಜ್ಯ ವಹಿವಾಟಿನ ಪರವಾನಿಗೆ ಮತ್ತು ನಗರಸಭೆಯ ನಿಯಮಗಳನ್ನು 3 ದಿನಗಳಲ್ಲಿ ಪೂರೈಸದಿದ್ದರೆ ವ್ಯಾಪಾರದ ಕಾಂಪ್ಲೆಕ್ಸಿಗೆ ಬೀಗ ಹಾಕುವ ಎಚ್ಚರಿಕೆಯನ್ನು ನಗರಸಭೆಯ ಅಧಿಕಾರಿ ವರ್ಗ ನೀಡಿತ್ತು. ಅಲ್ಲದೇ ಸಾರ್ವಜನಿಕ ಜಾಗವನ್ನೇ ಪಾರ್ಕಿಂಗ್ ಜಾಗವಾಗಿ ತೋರಿಸಿ ನಿಯಮ ಉಲ್ಲಂಘನೆಯಾಗಿರುವುದನ್ನು ಸಹ ನೋಟಿಸಿನಲ್ಲಿ ಉಲ್ಲೇಖಿಸಲಾಗಿತ್ತು. ಇದರಿಂದ ಸರ್ಕಾರಿ ಜಾಗ ಕಬಳಿಕೆ ಮತ್ತು ನಿಯಮ ಬಾಹಿರವಾಗಿ ಕಟ್ಟಡಗಳನ್ನು ಕಟ್ಟುವುದು, ನಗರಸಭೆಯ ನಂಬರನ್ನು ಕಟ್ಟಡಗಳಿಗೆ ಪಡೆಯದೇ ಬೃಹತ್ ಕಟ್ಟಡ ನಿರ್ಮಿಸಿ ನಿಯಮ ಗಾಳಿಗೆ ತೂರಿ ಮಾರಾಟ ಮಾಡುತ್ತಿರುವ ಬಿಗ್ ಬಿಲ್ಡರುಗಳಲ್ಲಿ ನಡುಕ ಹುಟ್ಟಿಸಿತ್ತು. ನಗರಸಭೆಯ ನೋಟೀಸಿಗೆ ಸ್ಪಂದಿಸಿ ತಾವಾಗಿಯೇ ಅತಿಕ್ರಮಣ ತೆರವು ಮಾಡಿದ ಕಟ್ಟಡ ಮಾಲಿಕರಿಗೆ ಕಾರ್ಯಾಚರಣೆಯಲ್ಲಿ ವಿನಾಯತಿ ತೋರಲಾಗಿದೆ. ಕೆಲವರು ಕೋರ್ಟ್ ಕಚೇರಿ ಎಂದು ದಾಖಲೆ ತೋರಿರುವುದರಿಂದ ಅಧಿಕಾರಿಗಳು ಕೆಲ ಸಮಯ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.