ಬಹಿರ್ದೆಸೆಗೆ ಹೋದ ಬಾಲಕಿ ನಾಪತ್ತೆ

ಪೋಷಕರಿಂದ ಅಪಹರಣ ದೂರು

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಬಾಲಕಿಯೊಬ್ಬಳು ಮಧ್ಯರಾತ್ರಿ ಬಹಿರ್ದೆಸೆಗೆ ಹೋದ ಸಂದರ್ಭ ಅಪಹರಿಸಲಾಗಿದೆ ಎಂದು ಬಾಲಕಿಯ ತಂದೆ ಪೊಲೀಸ್ ದೂರು ನೀಡಿದ ಘಟನೆ ಬುಧವಾರ ಮಧ್ಯರಾತ್ರಿ ಬೈಂದೂರಿನ ಪಡುವರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಬಾಗಿಲು ಎಂಬಲ್ಲಿ ನಡೆದಿದೆ.

ಪಡುವರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಬಾಗಿಲು ನಿವಾಸಿಯಾಗಿರುವ ಹದಿನೇಳು ವರ್ಷ ಪ್ರಾಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆಯಾದವಳು. ಬುಧವಾರ ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ ಬಾಲಕಿ ಮನೆಯ ಹೊರಗಿರುವ ಶೌಚಾಲಯಕ್ಕೆ ಬಹಿರ್ದೆಸೆಗೆಂದು ಹೋಗಿದ್ದಳು. ಈ ಸಂದರ್ಭ ಆಕೆಯ ತಂದೆ ಬಾಲಕಿ ಹೊರಹೋಗಿದ್ದನ್ನು ಗಮನಿಸಿದ್ದರು. ಆದರೆ ಬಹಳ

ಹೊತ್ತಾದರೂ ಆಕೆ ಮನೆಯೊಳಕ್ಕೆ ಬಾರದೇ ಇದ್ದುದನ್ನು ಕಂಡು ತಕ್ಷಣ ಮನೆಯವರನ್ನು ಎಬ್ಬಿಸಿ ಹುಡುಕಾಡಿದ್ದಾರೆ. ಆಕೆ ಧರಿಸುತ್ತಿದ್ದ ಚಪ್ಪಲಿಯೂ ಮನೆಯ ಹೊರಗಡೆಯೇ ಇದ್ದು, ಆಕೆ ಸ್ವ ಇಚ್ಚೆಯಿಂದ ನಾಪತ್ತೆಯಾಗಿಲ್ಲ. ಬದಲಾಗಿ ಆಕೆಯನ್ನು ಯಾರೋ ಅಪಹರಿಸಿದ್ದಾರೆ ಎಂದು ಬೈಂದೂರು ಠಾಣೆಗೆ ದೂರು ನೀಡಿದ್ದಾರೆ.

ಕಳೆದ ವರ್ಷ ಬಾಲಕಿಯ ಮನೆ ಸಮೀಪದಲ್ಲಿ ಇರುವ ಮನೆಯೊಂದರಲ್ಲಿ ಪ್ರಥಮ ಪಿಯುಸಿಗೆ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಆಕೆಯನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದು, ಆತ ಪ್ರಥಮ ಪಿಯುಸಿಯಲ್ಲಿ ಫೇಲಾಗಿ ಶಿವಮೊಗ್ಗದಲ್ಲಿದ್ದಾನೆ. ಆತನೇ ಆಕೆಯನ್ನು ಬಲಾತ್ಕಾರವಾಗಿ ಅಪಹರಿಸಿರಬಹುದು ಎಂಬುದಾಗಿ ಆಕೆಯ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬುಧವಾರ ರಾತ್ರಿಯೇ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಅಲ್ಲದೇ ಗುರುವಾರ ರಾತ್ರಿಯವರೆಗೂ ಎಫೈಆರ್ ಪ್ರತಿ ನೀಡಿಲ್ಲ ಎಂದು ನಾಪತ್ತೆಯಾಗಿರುವ ಬಾಲಕಿಯ ಮನೆಯವರು ಆರೋಪಿಸಿದ್ದಾರೆ.

ಇದೀಗ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆರೋಪಿ ಹಾಗೂ ನಾಪತ್ತೆಯಾಗಿರುವ ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಬಾಲಕಿ ಮನೆಯವರ ಆತಂಕಕ್ಕೆ ಕಾರಣವಾಗಿದೆ.