ದಾಖಲೆಪತ್ರ ಪರಿಶೀಲಿಸಿ ಹಕ್ಕುಪತ್ರ ನೀಡಲು ಸಚಿವ ಕಾಗೋಡು ಸೂಚನೆ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಸರಕಾರಿ ಯೋಜನೆಯ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಸತಾಯಿಸಬೇಡಿ. ದಾಖಲೆ ಪತ್ರಗಳನ್ನು ಪರಿಶೀಲಿಸಿ ಸರಿ ಇದಲ್ಲಿ ಕೂಡಲೇ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಿ. ಆದರೆ ಹಣಕ್ಕಾಗಿ ಬಡವರನ್ನು ಪೀಡಿಸಿರುವ ಪ್ರಕರಣ ಬೆಳಕಿಗೆ ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಸಿದರು.

ಮಂಗಳೂರು ವಿ ವಿ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಬಳಿಕ ಅವರು ಮಾಧ್ಯಮದೊಂದಿಗೆ ಅವರು ಮಾತನಾಡಿದರು.

“ಬಗರ್ ಹುಕುಂ ಯೋಜನೆಯಡಿಯಲ್ಲಿ ಫಾರಂ 50ರಡಿ ಮೂರು ಸಾವಿರ ಹಾಗೂ ಫಾರಂ 53ರಡಿ 15,671 ಅರ್ಜಿಗಳನ್ನು ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ. ಫಾರಂ 50ರಲ್ಲಿ 694 ಅರ್ಜಿಗಳು ಮತ್ತು ಫಾರಂ 53ರಡಿ 12,256 ಅರ್ಜಿಗಳು ಬಾಕಿ ಇವೆ. ಇವುಗಳ ವಿಲೇವಾರಿಗೆ ಕ್ರಮ ಕೈಗೊಳ್ಳಿ” ಎಂದರು.

“ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 94ಸಿ ಯೋಜನೆಯಡಿಯಲ್ಲಿ 77,814 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 73,397 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದ 4417 ಅರ್ಜಿಗಳ ವಿಲೇವಾರಿಗೆ ಕ್ರಮ ಜರುಗಿಸಲಾಗುವುದು. 94 ಸಿಸಿ ಯೋಜನೆಯಡಿ 30,872 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 9309 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 21.563 ಅರ್ಜಿಗಳು ಬಾಕಿ ಇದೆ. ಈಗಾಗಲೇ 35,577 ಹಕ್ಕುಪತ್ರಗಳನ್ನು ನೀಡಲಾಗಿದೆ” ಎಂದರು.

ಪ್ರತೀ ತಾಲೂಕಿನ ಪ್ರಗತಿ ಪರಿಶೀಲನೆ ನಡೆಸಿ ಇಲಾಖೆಗೆ ವರದಿ ಸಲ್ಲಿಸಿ ಎಂದ ಸಚಿವರು, ದಾಖಲೆ ಪತ್ರ ಪರಿಶೀಲನೆ ಬಳಿಕವಷ್ಟೇ ಹಕ್ಕುಪತ್ರ ನೀಡಿ ಎಂದರು.