ವಿಶ್ವ ಆರೋಗ್ಯ ಸಂಸ್ಥೆಯ ವಾಯು ಗುಣಮಟ್ಟ ಮಾನದಂಡ ಅನುಸರಿಸಿದರೆ ಭಾರತೀಯರ ಜೀವಿತಾವಧಿ 4 ವರ್ಷ ಹೆಚ್ಚಾಗಬಹುದು

ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ವಾಯು ಗುಣಮಟ್ಟದ ಮಾನದಂಡಗಳಿಗೆ ಬದ್ಧವಾಗಿ ಭಾರತ ತನ್ನ ವಾಯು ಮಾಲಿನ್ಯ ಮಟ್ಟವನ್ನು ಕಡಿಮೆಗೊಳಿಸಿದ್ದೇ ಆದಲ್ಲಿ ಭಾರತೀಯರ ಆಯುಷ್ಯ ಸರಾಸರಿಗಿಂತ ನಾಲ್ಕು ವರ್ಷ ಹೆಚ್ಚಾಗಬಹುದು, ಎಂದು ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನಸ್ಟಿಟ್ಯೂಟ್ ಬಿಡುಗಡೆಗೊಳಿಸಿರುವ ವಾಯು ಮಾಲಿನ್ಯ-ಜೀವನ ಸೂಚ್ಯಂಕ (ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್) ತಿಳಿಸಿದೆ.

ವಾಯು ಮಾಲಿನ್ಯ ನಿಯಂತ್ರಣಗೊಂಡರೆ ಭಾರತದ ಅತ್ಯಂತ ಹೆಚ್ಚು ಜನಸಂಖ್ಯೆಯಿರುವ ಪಟ್ಟಣಗಳ ಪೈಕಿ ರಾಷ್ಟ್ರ ರಾಜಧಾನಿಯಾದ ದೆಹಲಿಯ ಜನರ ಸರಾಸರಿ ಜೀವಿತಾವಧಿಯಲ್ಲಿ ಸುಮಾರು 9 ವರ್ಷಗಳ ಹೆಚ್ಚಳವಾದರೆ ಆಗ್ರಾದಲ್ಲಿ ಹಾಗೂ ಬರೇಲಿಯಲ್ಲಿ ಇದು 8.1 ಹಾಗೂ 7.8 ವರ್ಷಗಳಷ್ಟು ಹೆಚ್ಚಾಗಲಿದೆ.

ಪಿಎಂ 2.5 ಅಥವಾ 2.5 ಮೈಕ್ರಾನಿಗಿಂತಲೂ ಕಡಿಮೆ ಗಾತ್ರದ ಪಾರ್ಟಿಕ್ಯುಲೇಟ್ ಮ್ಯಾಟರ್ಸ್ ಉಸಿರಾಟದೊಂದಿಗೆ ದೇಹ ಪ್ರವೇಶಿಸಿದಾಗ ಅದು ಕೆಲವೊಮ್ಮೆ ಶ್ವಾಸಕೋಶ ಹಾಗೂ ದೇಹದ ರಕ್ತ ಪರಿಚಲನಾ ವ್ಯವಸ್ಥೆಗೂ ಹರಡಿ ಗಂಭೀರ ತೊಂದರೆಯುಂಟು ಮಾಡಬಹುದು. ಈ ಪಿಎಂ 2.5 ವಿಚಾರದಲ್ಲಿ ದೇಶವು ರಾಷ್ಟ್ರೀಯ ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಪಾಲಿಸಿದಾಗ ಜನರ ಜೀವಿತಾವಧಿಯಲ್ಲಿ ಹೆಚ್ಚಳವಾಗುವ ಬಗ್ಗೆ ಈ ಸೂಚ್ಯಂಕ ಅಂದಾಜು ಮಾಡಿದೆ.

ಭಾರತದ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕವು ಗಾಳಿಯಲ್ಲಿ ಎಂಟು ವಿಧದ ಮಾಲಿನ್ಯಕಾರಕಗಳನ್ನು ಗುರುತಿಸಿ ಅವುಗಳಿಂದುಂಟಾಗಬಹುದಾದ ಹಾನಿಯನ್ನು ಅಂದಾಜಿಸಿ ಅಂತೆಯೇ ಶ್ರೇಣಿ ಮಾಡಿದರೆ ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಂತೆ ಗಾಳಿಯಲ್ಲಿ ಪ್ರತಿ ಕ್ಯೂಬಿಕ್ ಮೀಟರಿಗೆ 10 ಮೈಕ್ರೋಗ್ರಾಮಿನಷ್ಟು ಪಿಎಂ 2.5 ಇರಬಹುದಾಗಿದ್ದರೆ ಭಾರತದಲ್ಲಿ ಇದು ಅದಕ್ಕಿಂತ ಮೂರು ಪಟ್ಟಿಗಿಂತಲೂ ಅಧಿಕವಿದ್ದು, ಪ್ರತಿ ಕ್ಯೂಬಿಕ್ ಮೀಟರಿಗೆ 40 ಮೈಕ್ರೋಗ್ರಾಮಿನಷ್ಟಿದೆ.

ಸುಮಾರು 1.55 ಕೋಟಿಯಷ್ಟು ಜನಸಂಖ್ಯೆಯಿರುವ ರಾಜಧಾನಿ ದೆಹಲಿಯಲ್ಲಿ ಇದು 98 ಮೈಕ್ರೋಗ್ರಾಮಿನಷ್ಟಿರುವುದು ಬಹಳಷ್ಟು ಆತಂಕಕಾರಿಯಾಗಿದೆ.

ಗಾಳಿಯಲ್ಲಿರುವ ಪಿಎಂ 2.5 ಮತ್ತಿತರ ಮಾಲಿನ್ಯಕಾರಕಗಳನ್ನು ನಿಯಂತ್ರಿಸಲು ಭಾರತಕ್ಕೆ ಬಹಳಷ್ಟು ಅವಕಾಶಗಳು ಲಭ್ಯವಿವೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನಸ್ಟಿಟ್ಯೂಟ್ ನಿರ್ದೇಶಕ ಮೈಕೇಲ್ ಗ್ರೀನ್ ಸ್ಟೋನ್ ಹೇಳುತ್ತಾರೆ.