ಪ್ರವಾಸಗಳ ಮಹತ್ವ

ಬದುಕು ಬಂಗಾರ-50

ಪ್ರವಾಸ ಹೋಗುವುದೆಂದರೆ ಯಾರಿಗಿಷ್ಟವಿಲ್ಲ ಹೇಳಿ ? ಹೊಸ ಹೊಸ ಜಾಗ, ವಿಭಿನ್ನ ಸಂಸ್ಕøತಿ, ಪ್ರಕೃತಿಯ ಸೊಬಗಿನ ರಸದೌತಣವನ್ನೇ ಪ್ರವಾಸ ನಮಗೆ ನೀಡುತ್ತದೆ. ಇಷ್ಟೇ ಅಂದುಕೊಂಡಿರಾ ? ಪ್ರವಾಸ ಕೈಗೊಳ್ಳುವುದರಿಂದ ಜೀವನದ ಬಗ್ಗೆ ನಮ್ಮ ದೃಷ್ಟಿಕೋನವೇ ಬದಲಾಗುವ ಸಾಧ್ಯತೆಯೂ ಇದೆಯಂತೆ. ನಿಮ್ಮ ಮನಸ್ಸು ದೇಹ ಮತ್ತು ಆತ್ಮಕ್ಕೆ ಒಂದು ಉತ್ತಮ ಪ್ರವಾಸಾನುಭವ ಏಕೆ ಅಗತ್ಯವೆಂಬುದಕ್ಕೆ ವಿಜ್ಞಾನ ಈ ಕೆಳಗಿನ ಕಾರಣಗಳನ್ನು ನೀಡುತ್ತದೆ.

ಸೃಜನಶೀಲತೆಯನ್ನು ಉತ್ತೇಜಿಸುತ್ತದೆ : ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಜರ್ನಲ್ ಕೆಲ ಸಮಯದ ಹಿಂದೆ ನಡೆಸಿದ ಅಧ್ಯಯನವೊಂದರ ಪ್ರಕಾರ ತಮ್ಮ ಹುಟ್ಟೂರು ಬಿಟ್ಟು ಬೇರೆ ಕಡೆ ಕೆಲಸ ಮಾಡುವವರು ಹೆಚ್ಚು ಸೃಜನಶೀಲರಾಗಿರುತ್ತಾರಂತೆ. ಹೊಸ ಹೊಸ ಸಂಸ್ಕøತಿಯ ಅನಾವರಣವೇ ಇದಕ್ಕೆ ಕಾರಣ. ವಿವಿಧ ಕಡೆಗಳ ಸಂಸ್ಕøತಿಯ ಬಗ್ಗೆ ನಾವು ಅರಿತಾಗ ಅದು ನಮ್ಮನ್ನು ವಿಭಿನ್ನವಾಗಿ ಯೋಚಿಸಲು ಪ್ರೇರೇಪಿಸುವುದಲ್ಲದೆ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ.

ನಿಮ್ಮ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ : ಆಗಾಗ ಪ್ರವಾಸಗೈ ಯ್ಯುತ್ತಲೇ ಇರುವವರಿಗೆ ವಿಶ್ವಾಸ, ನಂಬಿಕೆ ಹೆಚ್ಚಾಗುವುದಲ್ಲದೆ ಸಹೋದರತೆಯ ಭಾವನೆಯೂ ಬೆಳೆಯುವುದು. ವಿವಿಧ ಸ್ಥಳಗಳಿಗೆ ತೆರಳಿ ಅಲ್ಲಿ ವಾಸಿಸಿ ಅಲ್ಲಿನ ಜನರೊಂದಿಗೆ ಬೆರೆತಾಗ ನಮ್ಮ ಸಂಸ್ಕøತಿ, ಜೀವನ ಶೈಲಿ ಭಿನ್ನವಾದರೂ ಕೊನೆಗೆ ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆ ಮೂಡುವುದು.

 ವಿನೀತರಾಗಿ ಬಿಡುತ್ತೀರಿ : ವಿವಿಧ ಸ್ಥಳಗಳಿಗೆ, ರಮ್ಯ ರಮಣೀಯ ತಾಣಗಳಿಗೆ ಭೇಟಿ ನೀಡಿದಾಗ ಪ್ರಕೃತಿಯ ಸೌಂದರ್ಯ ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ ಹಾಗೂ ಪ್ರಕೃತಿಯೆದುರು ನೀವು ವಿನೀತರಾಗಿ ಬಿಡುತ್ತೀರಿ.

ಮುಕ್ತ ಮನಸ್ಸು ನಿಮ್ಮದಾಗುತ್ತದೆ : ಪ್ರವಾಸದ ಅನುಭವಗಳು ಮನುಷ್ಯನನ್ನು ಹೆಚ್ಚು ಪ್ರಬುದ್ಧಗೊಳಿಸುವುದಲ್ಲದೆ ಹೃದಯ ವೈಶಾಲ್ಯಕ್ಕೂ ದಾರಿ ಮಾಡಿಕೊಡುವುದು.

ನಿಮ್ಮತನದ ಅರಿವು ನಿಮಗಾಗುವುದು : ಮನೆಯಲ್ಲಿದ್ದಾಗ ನೀವು ದಿನಂಪ್ರತಿ ನಡೆಯುವ ಕೆಲಸಗಳಿಗೆ ಜೋತು ಬೀಳುತ್ತೀರಲ್ಲದೆ ಜೀವನದಲ್ಲಿ ಹೊಸತನವಿಲ್ಲದೆ ಮಂಕಾಗಿ ಬಿಡುವ ಸಾಧ್ಯತೆಯೂ ಇದೆ. ಹೀಗಾಗದೇ ಇರುವಂತಾಗಲು ಬಿಡುವಾದಾಗಲೆಲ್ಲಾ ಎಲ್ಲಿಯಾದರೂ ಸುಂದರ ಸ್ಥಳಕ್ಕೆ ನಿಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿ. ಇದರಿಂದ ಮನಸ್ಸು ಉಲ್ಲಸಿತವಾಗುತ್ತದೆ ಹಾಗೂ ನಿಮ್ಮನ್ನು ನೀವು ಅರಿಯಲು ಕೂಡ ಅದು ಅನುವು ಮಾಡಿಕೊಡುವುದು.

ಪಾರವೇ ಇಲ್ಲದ ಸಂತೋಷ : ಇದು ಪ್ರವಾಸ ನಮಗೆ ನೀಡುವ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ಭೌತಿಕ ವಸ್ತುಗಳಿಗಿಂತ ನಮ್ಮ ಅನುಭವಗಳೇ ನಮಗೆ ಹೆಚ್ಚು ಆನಂದ ನೀಡುವವು. ಹಾಗೆಯೇ ಪ್ರವಾಸದ ಕ್ಷಣಗಳು ಯಾವತ್ತೂ ಅವಿಸ್ಮರಣೀಯವಾಗುವುದು.