ಗಂಡನ ಪ್ರೇಯಸಿ ಗರ್ಭಿಣಿಯಂತೆ

ಇಷ್ಟು ದಿನ ಆ ಮಹಿಳೆಯ ಜೊತೆ ಯಾವ ಬಂಧನವೂ ಇಲ್ಲದೇ ಮಜಾ ಉಡಾಯಿಸುತ್ತಿದ್ದ ತಪ್ಪಿಗೆ ಅವರೇ ಅದಕ್ಕೆ ಉತ್ತರ ಕಂಡುಕೊಳ್ಳಲಿ ಬಿಡಿ.

ಪ್ರ : ನನ್ನ ವಯಸ್ಸೀಗ 37. ಮದುವೆಯಾಗಿ ಹತ್ತು ವರ್ಷವಾಯಿತು. ಎಂಟು ವರ್ಷದ ಮಗಳಿದ್ದಾಳೆ. ನಾನು ಹತ್ತನೇ ತರಗತಿಯವರೆಗೆ ಮಾತ್ರ ಓದಿದ್ದು. ನನ್ನ ಗಂಡನಿಗೆ ಬಿಸಿನೆಸ್ ಇದೆ. ಅವರು ಬೇರೆ ಹೆಂಗಸೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿರುವುದು ಗೊತ್ತಾಗಿಯೂ ನಾನು ಏನೂ ಮಾಡುವ ಪರಿಸ್ಥಿತಿಯಲ್ಲಿಲ್ಲ. ಮಗಳ ಮುಂದಿನ ಜೀವನ ನೆನೆದು ಬೇಸರವಾದರೂ ಸಹಿಸಿಕೊಂಡು ಬದುಕುತ್ತಿದ್ದೇನೆ. ಅವರಿಗೆ ಮಗಳ ಮೇಲೆ ಪ್ರೀತಿ ಇದೆ. ನನಗೂ ಯಾವುದಕ್ಕೂ ಕಮ್ಮಿ ಮಾಡಿಲ್ಲ. ಆ ಮಹಿಳೆ  ನಮ್ಮ ಯಜಮಾನರಿಗೆ ಬಿಸಿನೆಸ್ಸಿನಲ್ಲಿ ಸಹಾಯ ಮಾಡುವವಳಂತೆ. ಅವಳು ತನ್ನ ಗಂಡನಿಂದ ವಿಚ್ಛೇದನ ಪಡೆದವಳು. ನಮ್ಮವರು ಅವಳನ್ನು ಬಿಡಲು ತಯಾರಿದ್ದರೂ ಅವಳು ಇವರಿಗೆ ಅಂಟಿಕೊಂಡಿದ್ದಾಳಂತೆ. ಆದರೂ ಅವಳ ಜೊತೆಗಿನ ಸಂಬಂಧ ಕಳಚಿಕೊಳ್ಳುವುದಾಗಿ ಕಳೆದ ತಿಂಗಳು ನನಗೆ ಭರವಸೆ ಕೊಟ್ಟಿದ್ದರು.  ಆದರೆ ಅದು ಈಡೇರುವ ಸಾಧ್ಯತೆ ಕಡಿಮೆ. ಅವರು ಕಳೆದ ವಾರ ನಾಲ್ಕು ದಿನ ಮನೆಗೇ ಬಂದಿರಲಿಲ್ಲ. ಬಂದ ನಂತರವೂ ಯಾವುದೋ ಯೊಚನೆಯಲ್ಲಿ ಬಿದ್ದ ಹಾಗೆ ಇದ್ದರು. ಒತ್ತಾಯಿಸಿ ಕೇಳಿದಾಗ ಅವರು ಹೇಳಿದ್ದೇನೆಂದರೆ ಆ ಮಹಿಳೆ ಈಗ ಗರ್ಭಿಣಿಯಂತೆ. ನನಗೇನೂ ಮಾಡಲು ತೋಚುತ್ತಿಲ್ಲ. ನನ್ನ ಮತ್ತು ಮಗಳ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಾಗಿದೆ. ನಾನೀಗ ಏನು ಮಾಡಬೇಕು?

: ನಿಮ್ಮ ಗಂಡ ನಿಮಗೆ ಮೋಸ ಮಾಡಿದ್ದಲ್ಲದೇ ಸುಳ್ಳೂ ಹೇಳುತ್ತಿದ್ದಾರೆ. ಅವರೆಂದೂ ಆ ಮಹಿಳೆಯ ಜೊತೆಗಿನ ಸಂಬಂಧ ಕಳೆದುಕೊಳ್ಳಲು ಪ್ರಯತ್ನಿಸಿಯೇ ಇಲ್ಲ. ಹಾಗಲ್ಲವಾದರೆ ಆಕೆ ಗರ್ಭಿಣಿಯಾಗುತ್ತಿದ್ದಳಾ? ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲು ಮತ್ತು ನಿಮ್ಮಿಂದ ಸಾಂತ್ವಾನ ಪಡೆಯಲು ಆ ಮಹಿಳೆಯೇ ತನ್ನ ಹಿಂದೆ ಬಿದ್ದಿದ್ದಾಳೆ ಅನ್ನುವ ಸಬೂಬು ಅಷ್ಟೇ. ನೀವು ಹೆಚ್ಚು ಕಲಿತಿಲ್ಲ ಅಂದ ಮಾತ್ರಕ್ಕೆ ಬೇರೆ ಮಹಿಳೆಯ ಸಹವಾಸ ಮಾಡಿದ್ದು ಎಷ್ಟು ಮಾತ್ರಕ್ಕೂ ಸರಿಯಲ್ಲ. ನಿಮ್ಮ ಈ ಕೀಳರಿಮೆ ಮತ್ತು ನಿಮ್ಮ ಸಹನೆಯೇ ಅವರಿಗೆ ಅಡ್ಡದಾರಿ ಹಿಡಿಯಲು ತಾಕತ್ತು ನೀಡಿದೆ. ಆ ಮಹಿಳೆ ನಿಮ್ಮ ಗಂಡನ ಜೊತೆಗಿನ ಸಂಬಂಧವನ್ನು ಸಕ್ರಮ ಗೊಳಿಸಿಕೊಳ್ಳಲಿಕ್ಕೇ ಗರ್ಭಿಣಿಯಾಗಿದ್ದಾಳೆ. ಇಷ್ಟು ದಿನ ಆ ಮಹಿಳೆಯ ಜೊತೆ ಯಾವ ಬಂಧನವೂ ಇಲ್ಲದೇ ಮಜಾ ಉಡಾಯಿಸುತ್ತಿದ್ದ ತಪ್ಪಿಗೆ ಅವರೇ ಅದಕ್ಕೆ ಉತ್ತರ ಕಂಡುಕೊಳ್ಳಲಿ ಬಿಡಿ. ನಿಮ್ಮ ಕುಟುಂಬದವರ ನೆರವು ಪಡೆದು ನಿಮಗೆ ಮತ್ತು ನಿಮ್ಮ ಮಗಳಿಗೆ ನ್ಯಾಯ ಸಿಗುವಂತೆ ಹೋರಾಡಿ. ನೈತಿಕತೆ ಇಲ್ಲದ ಗಂಡಸನ್ನು ಮದುವೆಯಾದ ತಪ್ಪಿಗೆ ನೀವು ಮದುವೆ ಮುರಿದುಕೊಳ್ಳಲೂ ಆಗದೇ ಅವನ ಜೊತೆ ಬಾಳಲೂ ಹಿಂಸೆ ಅನುಭವಿಸಬೇಕಾಗಿದ್ದು ಮಾತ್ರ ದುರಂತ.