ಗಂಡನಿಗೆ ನನ್ನ ಕಸಿನ್ ಮೇಲೆ ಆಕರ್ಷಣೆ

ಚೇತನ

ಪ್ರ : ನಾನೊಂದು ನರ್ಸಿಂಗ್‍ಹೋಮಿನಲ್ಲಿ ನರ್ಸ್ ಕೆಲಸ ಮಾಡುತ್ತಿದ್ದೇನೆ. ನನ್ನ ಪತಿಗೆ ಸರಕಾರೀ ನೌಕರಿ ಇದೆ. ಎರಡು ಮಕ್ಕಳಿದ್ದಾರೆ. ಮಕ್ಕಳು ಚಿಕ್ಕವರಿರುವಾಗ ಅವರನ್ನು ನೋಡಿಕೊಳ್ಳಲು ಒಬ್ಬಳು ಹುಡುಗಿ ಇದ್ದಳು. ಈಗ ಅವರು ಶಾಲೆಗೆ ಹೋಗುವುದರಿಂದ ಗಂಡನ ಸಹಾಯದಿಂದ ಮನೆ, ಮಕ್ಕಳು, ಆಸ್ಪತ್ರೆ ಕೆಲಸ ಎಲ್ಲವನ್ನೂ ನಿರ್ವಹಿಸುತ್ತಿದ್ದೆ. ರಜಾ ದಿನಗಳಲ್ಲಿ ಪಿಕ್ನಿಕ್ ಹೋಗುತ್ತಾ ಸಂತಸದಿಂದಲೇ ನಮ್ಮ ಜೀವನ ಸಾಗುತ್ತಿತ್ತು. ಆದರೆ ನನ್ನ ಕಸಿನ್ ಒಬ್ಬಳು ನನ್ನ ಜೀವನದಲ್ಲಿ ಧೂಮಕೇತುವಂತೆ ಬಂದಿದ್ದಾಳೆ. ಅವಳ ಗಂಡನಿಗೆ ಈ ಊರಿಗೆ ಆರು ತಿಂಗಳ ಹಿಂದೆ ವರ್ಗವಾಗಿ ಬಂದಾಗ ನಮ್ಮ ಕಂಪೌಂಡಿನಲ್ಲೇ ಇರುವ ಇನ್ನೊಂದು ಮನೆಯನ್ನು ಬಾಡಿಗೆಗೆ ಕೊಡಿಸಿದೆವು. ಅವಳಿಗೆ ಮಕ್ಕಳಿಲ್ಲ. ಅವಳ ಗಂಡನಿಗೆ ತಡರಾತ್ರಿವರೆಗೆ ಕೆಲಸ ಮತ್ತು ಆಗಾಗ ಬೇರೆ ಊರಿಗೆ ಟೂರ್ ಕೂಡಾ ಹೋಗುತ್ತಿರುತ್ತಾರೆ. ಆದ್ದರಿಂದ ಅವಳು ನಮ್ಮ ಮನೆಯಲ್ಲೇ ಹೆಚ್ಚಿನ ಹೊತ್ತು ಕಾಲ ಕಳೆಯುತ್ತಾಳೆ. ಮೊದಲು ಮಕ್ಕಳಿಗೆ ಹೋಂವರ್ಕ್‍ನಲ್ಲಿ ಸಹಾಯ ಮಾಡುತ್ತಿದ್ದರಿಂದ ನನಗೂ ಅದರಿಂದ ಹೆಲ್ಪ್ ಆಗುತ್ತಿತ್ತು. ಈಗೀಗ ನನ್ನ ಗಂಡನ ಜೊತೆ ಹರಟುತ್ತಾ ಕೂತು ಬಿಡುತ್ತಾಳೆ. ಗಂಡನಿಗೂ ಅವಳ ಜೊತೆ ಸಮಯ ಕಳೆಯುವುದು ಇಷ್ಟವಾಗುತ್ತಿದೆ ಅಂತ ಅವರ ಮುಖಭಾವದಿಂದಲೇ ಗೊತ್ತಾಗುತ್ತಿದೆ. ಅವಳ ಎದುರೇ ಕೆಲವೊಮ್ಮೆ ನನ್ನ ತಪ್ಪು ಹುಡುಕಿ ನನ್ನನ್ನು ಹಂಗಿಸಿ ಮಾತಾಡುತ್ತಾರೆ. ಅವಳು ಮಾಡಿದ ತಿಂಡಿ, ಅಡುಗೆಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹೊಗಳುತ್ತಾರೆ. ಅವರಿಬ್ಬರು ದಿನದಿಂದ ದಿನಕ್ಕೆ  ಹತ್ತಿರವಾಗುತ್ತಿದ್ದಾರೆ. ನನಗೂ ಶಿಫ್ಟ್ ಡ್ಯೂಟಿ ಇರುವುದರಿಂದ ಕೆಲವೊಮ್ಮೆ ಸಂಜೆ ಹೊತ್ತು ಮತ್ತು ರಾತ್ರಿ ಹೊತ್ತೂ ಮನೆಯಲ್ಲಿ ಇರಲು ಆಗುವುದಿಲ್ಲ. ಅಂತಹ ಸಮಯದಲ್ಲಿ ಅವಳ ಗಂಡನೂ ಊರಿನಲ್ಲಿ ಇಲ್ಲದಿದ್ದರೆ ಅವರ ನಡುವೆ ಬೇರೆ ರೀತಿಯ ಸಂಬಂಧ ಪ್ರಾರಂಭವಾದರೆ ಎನ್ನುವ ಆತಂಕ ಕಾಡುತ್ತಿದೆ. ನಾನೀಗ ಏನು ಮಾಡಲಿ?

: ಯಾವಾಗಲೂ ನೀರು ಹತ್ತಿರವಿರಬೇಕು, ನೆಂಟರು ದೂರವಿದ್ದರೆ ಚೆನ್ನ ಅಂತ ಗಾದೆಯ ಮಾತೇ ಇದೆಯಲ್ಲ. ಸಂಬಂಧಿಕರಿಂದ ತೊಂದರೆಯಾಗುತ್ತಿದ್ದರೂ ಅದನ್ನು ಬಾಯಿಬಿಟ್ಟು ಹೇಳಲೂ ಆಗದೇ, ಅನುಭವಿಸಲೂ ಕಷ್ಟವಾಗಿ ಕೆಲವೊಮ್ಮೆ ಸಂಕಟಕ್ಕೀಡಾಗಬೇಕಾಗುತ್ತದೆ. ಕೆಲವು ಸೂಕ್ಷ್ಮ ವಿಚಾರವನ್ನು ಗಂಡನಿಗೂ ಹೇಳಲು ಆಗದೇ ನೋವನುಭವಿಸುವಂತಾಗುತ್ತದೆ. ಗಂಡನಲ್ಲಿ ಈ ವಿಷಯ ಹೇಳಿದರೆ ಅವರೆಲ್ಲಿ ನಿಮ್ಮನ್ನು ಸಂಕುಚಿತ ಮನೋಭಾವದವಳು ಅಂತ ಅಂದುಕೊಂಡರೆ ಅನ್ನುವ ಆತಂಕವೂ ನಿಮಗಿರಬಹುದು. ಆದರೆ ನೀವು ನಿಮ್ಮಷ್ಟಕ್ಕೇ ನೋವು ಅನುಭವಿಸುವುದಕ್ಕಿಂತ ಪರೋಕ್ಷವಾಗಿಯಾದರೂ ಗಂಡನಿಗೆ ನಿಮ್ಮ ಮನಸ್ಸಿನಲ್ಲಾಗುವ ದುಗುಡವನ್ನು ಹೇಳಿಕೊಳ್ಳಿ. ಎಷ್ಟೆಂದರೂ ನೀವವರ ಪತ್ನಿ. ನಿಮ್ಮನ್ನು ಸಂತೋಷದಲ್ಲಿಡಬೇಕಾದ್ದು ಅವರ ಕರ್ತವ್ಯ ಕೂಡಾ. ನಿಮ್ಮ ಮನಸ್ಸು ನಿರಾಳವಾಗಿರದಿದ್ದರೆ ಅದು ಇಡೀ ಕುಟುಂಬದವರ ಮೇಲೆ ಪರಿಣಾಮ ಬೀಳುತ್ತದೆ. ನಿಮ್ಮ ಚಿಂತೆಯಿಂದಾಗಿ ಮಕ್ಕಳ ಅಭ್ಯಾಸದ ಬಗ್ಗೆ, ಅವರ ಬೇಕುಬೇಡಗಳ ಬಗ್ಗೆ ನಿಮ್ಮ ಗಮನ ಕಡಿಮೆಯಾಗುತ್ತದೆ. ನಿಮ್ಮ ಕಸಿನ್ ಹತ್ತಿರವೂ ಇಡೀ ಹೊತ್ತೂ ಆಕೆ ನಿಮ್ಮ ಮನೆಯಲ್ಲಿ ಬಂದು ಕೂರುವುದರ ಬಗ್ಗೆ ನಿಮ್ಮ ಅಸಮಾಧಾನವನ್ನು ಮಾತಿನಿಂದಲೋ ಇಲ್ಲಾ ಕೃತಿಯಿಂದಲೋ ಪ್ರಕಟಿಸಿ. ಅವಳ ಗಂಡನಿಗೂ ಅದು ಅರ್ಥವಾಗುವಂತೆ ಮಾಡಿ. ಹೇಗಾದರೂ ಅವರು ಮನೆ ಬದಲಾಯಿಸುವಂತೆ ಮಾಡಿದರೆ ನೀವು ಸ್ವಲ್ಪ ನೆಮ್ಮದಿಯಿಂದ ಇರಬಹುದು. ಆದರೆ ನಿಮ್ಮ ಗಂಡ ಮತ್ತು ಅವಳ ಮಧ್ಯೆ ಬೇರೆ ಯಾವ ಕೆಟ್ಟ ಭಾವನೆಯಿಲ್ಲದಿದ್ದರೆ ನೀವು ಅವರ ಸ್ನೇಹದ ಬಗ್ಗೆ ಅಷ್ಟು ತಲೆಬಿಸಿ ಮಾಡಿಕೊಳ್ಳುವುದು ಅನಗತ್ಯ.

 

LEAVE A REPLY