ಗಂಡ ಮಾಜಿ ಪ್ರೇಮಿಯ ಮರೆತಿಲ್ಲ

ಪ್ರ : ನನಗೆ ಮದುವೆಯಾಗಿ ಆರು ತಿಂಗಳಾಯಿತು. ಆದರೆ ನಾವಿನ್ನೂ ಪತಿ-ಪತ್ನಿಯರಂತೆ ಬದುಕುತ್ತಿಲ್ಲ. ನಾನು ನೂರೆಂಟು ಕನಸುಗಳನ್ನು ಹೊತ್ತು ಗಂಡನ ಮನೆ ಪ್ರವೇಶಿಸಿದೆ. ಸಿರಿವಂತ ಕುಟುಂಬದ ಒಬ್ಬನೇ ಮಗ ಅಂತ ನನ್ನನ್ನು ಮದುವೆ ಮಾಡಿಕೊಟ್ಟರು. ಅತ್ತೆ, ಮಾವ ಎಲ್ಲರೂ ಸಜ್ಜನರೇ. ನನ್ನ ಗಂಡ ಸಹ ಮೃದುಸ್ವಭಾವದವರೇ. ಅವರು ನನ್ನ ಜೊತೆ ಉಳಿದೆಲ್ಲ ವಿಷಯದಲ್ಲಿ ಚೆನ್ನಾಗಿಯೇ ಇದ್ದಾರೆ. ಆದರೆ ನಾವಿನ್ನೂ ಒಂದಾಗಿಲ್ಲ. ಅವರ ಮನಸ್ಸಿನಲ್ಲಿ ನನಗಿನ್ನೂ ಜಾಗ ಕೊಟ್ಟಿಲ್ಲ. ಅವರು ಒಬ್ಬಳು ಹುಡುಗಿಯನ್ನು ತುಂಬಾ ಪ್ರೀತಿಸುತ್ತಿದ್ದರಂತೆ. ಆದರೆ ಆ ಹುಡುಗಿಯ ಅಪ್ಪ, ಅಮ್ಮ ಅವಳನ್ನು ಬೇರೆಯವರಿಗೆ ಬಲವಂತವಾಗಿ ಮದುವೆ ಮಾಡಿಕೊಟ್ಟರಂತೆ. ಅವಳನ್ನು ಮರೆಯಲು ನನ್ನ ಗಂಡನಿಗೆ ಇನ್ನೂ ಸಾಧ್ಯವಾಗಿಲ್ಲ. ಮಾವ ಹಾರ್ಟ್‍ಪೇಷಂಟ್ ಆಗಿರುವ ಕಾರಣ ಕುಟುಂಬದವರ ಒತ್ತಾಯಕ್ಕೆ ಅವರು ನನಗೆ ತಾಳಿ ಕಟ್ಟಿದ್ದು. ಹಗಲೆಲ್ಲ ನನ್ನ ಜೊತೆ ಸ್ನೇಹದಿಂದ ಇರುವುದರಿಂದ ಮನೆಯವರೆಲ್ಲರ ಮನಸ್ಸಿನಲ್ಲಿ ನಾವಿಬ್ಬರೂ ಚೆನ್ನಾಗಿದ್ದೇವೆ ಅನ್ನುವ ಭಾವನೆಯೇ ಇದೆ. ಆದರೆ ಕೋಣೆಯೊಳಗಿನ ಗುಟ್ಟು ನನಗೆ ಮಾತ್ರ ಗೊತ್ತಿದೆ. ಕೆಲವೊಮ್ಮೆ ನನಗೂ ಜಿದ್ದು ಬಂದು ನಾನಾಗಿಯೇ ಅವರ ಸಮೀಪ ಹೋದರೂ ಅವರಿಗೆ ನನ್ನ ಬಗ್ಗೆ ಆಸೆ ಮೂಡಿಲ್ಲ. `ನನ್ನ ಮನಸ್ಸು ಸರಿ ಇಲ್ಲ, ಸ್ವಲ್ಪ ಸಮಯಾವಕಾಶ ಕೊಡು, ಎಲ್ಲವೂ ಸರಿ ಹೋಗುತ್ತದೆ’ ಅನ್ನುತ್ತಿದ್ದಾರೆ. ಒಮ್ಮೊಮ್ಮೆ ಯಾವ ಸುಖಕ್ಕೋಸ್ಕರ ಮದುವೆಯಾಗಿದ್ದು ಅನ್ನುವ ಬೇಸರ ಮೂಡುತ್ತಿದೆ. ವಿಚ್ಛೇದನೆ ಕೊಟ್ಟು ಹೋಗಿಬಿಡೋಣ ಅನಿಸಿದರೂ ನನಗಿರುವ ಇಬ್ಬರು ಮದುವೆಯಾಗದ ತಂಗಿಯರನ್ನು ನೆನೆದು ಸುಮ್ಮನಿದ್ದೇನೆ. ಅದೂ ಅಲ್ಲದೇ ನನ್ನ ತವರಿನವರ ಆರ್ಥಿಕ ಸ್ಥಿತಿ ಸಾಧಾರಣವಿದೆ. ಇಂತಹ ಪರಿಸ್ಥಿತಿಯಲ್ಲಿ ನಾನೇನು ಮಾಡಲಿ?

: ಮಕ್ಕಳಿಗೆ ಮನಸ್ಸಿಲ್ಲದಿದ್ದರೂ ಬಲವಂತದ ಮದುವೆ ಮಾಡಿದರೆ ಅದನ್ನು ಅನುಭವಿಸುವವರು ಅವರ ಜೀವನ ಸಂಗಾತಿ. ಮಗನಿನ್ನೂ ತನ್ನ ಮೊದಲಿನ ಪ್ರೇಮಿಯನ್ನು ಮರೆತಿಲ್ಲ ಅಂತ ಗೊತ್ತಾದರೂ ಅವರ ತಂದೆತಾಯಿ ಇಮೋಶನಲ್ ಬ್ಲಾಕ್‍ಮೇಲ್ ಮಾಡಿ ಅವನಿಗೆ ಹೆಂಡತಿಯನ್ನು ಕಟ್ಟಿದರು. ಆದರೆ ಈಗ ನೋವು ಅನುಭವಿಸುತ್ತಿರುವವರು ನೀವು. ಹೆತ್ತವರ ದೃಷ್ಟಿಯಿಂದ ನೋಡುವುದಾದರೆ ಅವರಿಗೂ ತಮ್ಮ ಮಗನ ಸುಖಸಂಸಾರ ನೋಡಬೇಕು, ಎಲ್ಲರಂತೆ ತಾವೂ ಮೊಮ್ಮಗುವನ್ನು ಪಡೆಯಬೇಕು ಅನ್ನುವ ಆಸೆ ಸಹಜ. ಮದುವೆಯಾದ ನಂತರ ಎಲ್ಲವೂ ಸರಿಹೋಗುತ್ತದೆ ಅನ್ನುವ ಭಾವನೆ ಅವರದು. ಅವರದೂ ತಪ್ಪು ಅಂತ ಹೇಳುವುದು ಕಷ್ಟ.  ನೀವು ಇಷ್ಟು ಬೇಗ ನಿರಾಶರಾಗುವ ಅಗತ್ಯ ಇಲ್ಲ.  ನಿಮಗಿನ್ನೂ ಆಶಾಕಿರಣವಿದೆ. ನಿಮಗೀಗ ತುಂಬಾ ತಾಳ್ಮೆ, ಜಾಣ್ಮೆ ಎರಡೂ ಬೇಕು. ಅವರು ನಿಮ್ಮ ಜೊತೆ ಸ್ನೇಹದಿಂದಲೇ ಇದ್ದಾರೆ ಅಂದರೆ ಇಂದಲ್ಲ ನಾಳೆ ಅದು ಪ್ರೀತಿಯಲ್ಲಿ ಬದಲಾಗಿಯೇ ಆಗುತ್ತದೆ. ಅವರೀಗ ಮೊದಲಿನ ಹುಡುಗಿಯನ್ನು ಮರೆಯಲು ನೀವು ತೋರಿಸುವ ಒಲವೇ ಸಹಕರಿಸಬೇಕು. ಅವರೇ ಹೇಳಿದ ಹಾಗೆ ಸ್ವಲ್ಪ ಕಾಲಾವಕಾಶ ಅವರಿಗೆ ಕೊಡಿ. ನೀವು ತೋರಿಸುವ ಕಾಳಜಿ, ಪ್ರೀತಿ ಅವರನ್ನು ನಿಮ್ಮೆಡೆಗೆ ಸೆಳೆಯದೇ ಇರದು. ಈಗ ಅವರಿಂದ ದೂರಹೋಗುವ ಬಗ್ಗೆ ಯೋಚಿಸದೇ ಅವರನ್ನು ಒಬ್ಬ ಬಾಯ್‍ಫ್ರೆಂಡ್ ರೀತಿಯಲ್ಲಿ ಪ್ರೀತಿಸಿ. ಒಂದೇ ಸೂರಿನಡಿ ವಾಸಿಸುವಾಗ ಆತ್ಮೀಯತೆ ಬೆಳೆಯುತ್ತದೆ. ಅಗ್ನಿಸಾಕ್ಷಿಯಾಗಿ ಕೈಹಿಡಿದ ಮತ್ತು ಎಲ್ಲ ರೀತಿಯಲ್ಲಿ ಸಹಕರಿಸುವ ಹೆಂಡತಿಯಿಂದ ಅವರೂ ಹೆಚ್ಚು ದಿನ ದೂರ ಇರಲಾರರು.