ಗಂಡ ಇಷ್ಟು ಸ್ವಾರ್ಥಿ ಅಂದುಕೊಂಡಿರಲಿಲ್ಲ

ಪ್ರ : ಕಳೆದ ತಿಂಗಳು ಅಣ್ಣನ ಮದುವೆಯಾಯಿತು. ಕೆಲಸದ ನಿಮಿತ್ತ ಆರು ತಿಂಗಳ ಮಟ್ಟಿಗೆ ವಿದೇಶಕ್ಕೆ ಹೋಗಿದ್ದ ನಾನು ಅಣ್ಣನ ಮದುವೆಯ ಹಿಂದಿನ ದಿನ ವಾಪಾಸಾದೆ. ಅತ್ತಿಗೆಯನ್ನು ನಾನು ನೋಡಿದ್ದು ಮದುವೆಯ ಮಂಟಪದಲ್ಲೇ. ಅಣ್ಣನ ಮದುವೆಯನ್ನು ಎಂಜಾಯ್ ಮಾಡ ಬೇಕೆಂದುಕೊಂಡಿದ್ದ ನನಗೆ ಮದುವೆ ಹುಡುಗಿಯನ್ನು ನೋಡಿದಾಕ್ಷಣ ನನ್ನ ಸಂಭ್ರಮಕ್ಕೆ ನೀರೆರೆಚಿದಂತಾಯಿತು. ಅವಳು ಬೇರೆ ಯಾರೂ ಅಲ್ಲ, ನನ್ನ ಮೊದಲ ಗರ್ಲ್‍ಫ್ರೆಂಡ್. ಅವಳೂ ನಾನೂ ಕ್ಲಾಸ್‍ಮೇಟಾಗಿದ್ದೆವು. ನಮ್ಮಿಬ್ಬರ ನಡುವೆ ಒಲವೂ ಬೆಳೆದಿತ್ತು. ಅವಳ ಜೊತೆಗೆ ಹಲವಾರು ಬಾರಿ ಡೇಟಿಂಗ್ ಕೂಡಾ ಮಾಡಿದ್ದೆ. ಆದರೆ ಕಾಲೇಜು ಜೀವನ ಮುಗಿದ ನಂತರ ಇಬ್ಬರ ದಾರಿ ಬೇರೆಬೇರೆಯಾಯಿತು. ಅವಳ ತಂದೆಗೆ ಬೇರೆ ಊರಿಗೆ ವರ್ಗವಾದ್ದರಿಂದ ಡಿಗ್ರಿ ಮುಗಿದ ತಕ್ಷಣ ಅವಳು ಈ ಊರು ಬಿಟ್ಟಳು. ನನಗೂ ವಿದೇಶದಲ್ಲಿ ಕೆಲಸದ ಆಫರ್ ಸಿಕ್ಕಿದ್ದರಿಂದ ಅಲ್ಲಿಯ ಕೆಲಸದ ಒತ್ತಡದಲ್ಲಿ ಅವಳ ಜೊತೆಗೆ ಸಂಪರ್ಕ ಇಟ್ಟುಕೊಳ್ಳಲೂ ಸಾಧ್ಯವಾಗಲಿಲ್ಲ. ಆದರೂ ಈ ಸಲ ಹೇಗಾದರೂ ಅವಳನ್ನು ಸಂಪರ್ಕಿಸಿ ನಮ್ಮ ಪ್ರೀತಿಗೆ ಪುನಃ ಜೀವ ಕೊಡಬೇಕೆಂದಿದ್ದೆ. ಆದರೆ ನನ್ನ ಆಸೆ ಕೈಗೂಡಲು ಇನ್ನು ಸಾಧ್ಯವೇ ಇಲ್ಲ್ಲ. ನಾನು ಇಷ್ಟಪಟ್ಟ ಹುಡುಗಿ ಈಗ ನನ್ನ ಅಣ್ಣನ ಹೆಂಡತಿ! ಎರಡೂ ಕುಟುಂಬದವರು ಸೇರಿ ಮಾಡಿದ ಮದುವೆ ಅದು. ಅವಳೀಗ ನನ್ನನ್ನು ಹೊಸದಾಗಿ ಪರಿಚಯವಾದವರಂತೆ ನೋಡುತ್ತಿದ್ದಾಳೆ. ಆದರೂ ಅವಳ ಕಣ್ಣಿನಲ್ಲಿ ಒಂದು ರೀತಿಯ ವೇದನೆ ಕಾಣುತ್ತಿದ್ದೇನೆ. ಅವಳು ಒಬ್ಬಳೇ ಸಿಕ್ಕಿದಾಗ ಯಾಕೆ ಹೀಗೆ ಮಾಡಿದಿ ಅಂತ ಕೇಳಬೇಕೆಂದಿದ್ದೇನೆ. ಅಣ್ಣ ಮತ್ತು ಅವಳನ್ನು ಜೊತೆಯಾಗಿ ಕೂರಿಸಿ ಪೂಜೆ-ಹೋಮ ಮಾಡಿಸುವಾಗೆಲ್ಲ ನನಗೆ ಅದನ್ನು ನೋಡುವುದು ಕಷ್ಟವಾಗುತ್ತಿದೆ. ಅವರಿಬ್ಬರೂ ಜೊತೆಯಾಗಿ ಬೈಕಿನಲ್ಲಿ ಸುತ್ತುವಾಗ ಕಸಿವಿಸಿಯಾಗುತ್ತಿದೆ. ನನ್ನ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ? ಅವಳು ನನಗೋಸ್ಕರ ಸ್ವಲ್ಪವೂ ಕಾಯಲಿಲ್ಲವಲ್ಲ ಅಂತ ಅವಳ ಮೇಲೆ ಸಿಟ್ಟೂ ಬರುತ್ತಿದೆ. ನಾನೇನು ಮಾಡಲಿ ಈಗ?
: ಮದುವೆ ಅನ್ನುವುದು ಸ್ವರ್ಗದಲ್ಲಿ ನಡೆದಿರುತ್ತದೆ ಅಂತ ಅದಕ್ಕೇ ಹೇಳುವುದು. ಪ್ರೀತಿಸಿದವರನ್ನು ಮದುವೆಯಾಗಲೂ ಅದೃಷ್ಟ ಬೇಕು. ಆದರೆ ನಿಮ್ಮ ವಿಷಯದಲ್ಲಿ ಹೇಳುವುದಾದರೆ ನಿಮ್ಮ ಈ ಪರಿಸ್ಥಿತಿಗೆ ನೀವಿಬ್ಬರೂ ನಿಮ್ಮ ಸಂಬಂಧವನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದಿರುವುದೇ ಕಾರಣ. ನಿಮ್ಮಿಬ್ಬರ ನಡುವಿನ ಪ್ರೀತಿ ನಿಜವೇ ಆಗಿದ್ದರೆ ಈಗಿನ ಕಾಲದ ಮೊಬೈಲ್-ಇಂಟರ್ನೆಟ್ ಯುಗದಲ್ಲಿ ನೀವಿಬ್ಬರೂ ಸಂಪರ್ಕದಲ್ಲಿರಲಿಲ್ಲ ಅಂದರೆ ಆಶ್ಚರ್ಯವಾಗುತ್ತದೆ. ನಿಮ್ಮಿಬ್ಬರಿಗೂ ಆಗ ಅದು ಟೈಂಪಾಸ್ ಲವ್ ಆಗಿತ್ತು, ಆದರೆ ಈಗ ಒಬ್ಬರು ಇನ್ನೊಬ್ಬರನ್ನು ನೋಡಿದಾಕ್ಷಣ ಮೊದಲಿನದ್ದೆಲ್ಲ ನೆನಪಾಗಿ ಮನಸ್ಸಿಗೆ ಕಸಿವಿಸಿಯಾಗುತ್ತಿದೆ ಅಂತಲೇ ಅನಿಸುತ್ತಿದೆ. ಅವಳ ಮನಸ್ಸಿನ Àುೂಲೆಯಲ್ಲಿ ನೀವಿದ್ದರೂ ಹೇಳದೇ ಕೇಳದೇ ವಿದೇಶಕ್ಕೆ ಹಾರಿದ ಹುಡುಗನಿಗಾಗಿ ಅವಳು ಎಷ್ಟು ದಿನಾಂತ ಕಾಯಲು ಸಾಧ್ಯ? ಈಗ ನೀವಿಬ್ಬರೂ ಪರಿಸ್ಥಿತಿಯನ್ನು ಒಪ್ಪಿಕೊಂಡು ನಿಮ್ಮ ಭಾವನೆಯನ್ನು ಬದಲಿಸಿ ಕೊಳ್ಳಲೇಬೇಕು. ಒಂದು ವೇಳೆ ನೀವು ಅವಳ ಗಂಡನ ತಮ್ಮನೇ ಆಗಿರದಿದ್ದರೆ ಅವಳೀಗ ತನ್ನ ಹೊಸಜೀವನದಲ್ಲಿ ಖುಶಿಯಿಂದಿ ರುತ್ತಿದ್ದಳೇನೋ? ಅವಳಿಗೆ ಬೇರೆ ಯಾರದೋ ಜೊತೆಗೆ ಮದುವೆಯಾಗಿದ್ದರೆ ನಿಮಗೂ ಅಷ್ಟು ಅನಿಸುತ್ತಿರಲಿಲ್ಲವೇನೋ. ನೀವೀಗ ಹೊಸದಾಗಿ ಮದುವೆಯಾದವರ ಮಧ್ಯೆ ಶಿವಪೂಜೆಯಲ್ಲಿ ಕರಡಿ ಬಿಟ್ವವರಂತಾಗಬೇಡಿ. ನೀವು ಅದೇ ಮನೆಯಲ್ಲಿ ಇದ್ದರೆ ಅವಳಿಗೂ ಗಂಡನ ಜೊತೆ ಹಾಯಾಗಿರಲು ಮುಜುಗರವಾಗಬಹುದು. ಹೇಗೂ ಇಷ್ಟು ದಿನ ಬೇರೆ ಕಡೆ ಕೆಲಸದಲ್ಲಿದ್ದೀರಿ. ಹಾಗೇ ಇನ್ನೂ ಬೇರೆ ಕಡೆಯೇ ಇದ್ದು ನಿಮ್ಮ ಜೀವನ ರೂಪಿಸಿಕೊಳ್ಳಿ. ಕ್ರಮೇಣ ನಿಮ್ಮ ಮನಸ್ಸೂ ವಾಸ್ತವವನ್ನು ಒಪ್ಪಿಕೊಳ್ಳುತ್ತದೆ.