ಅತೀ ಶಿಸ್ತು ನನ್ನ ಉಸಿರುಗಟ್ಟಿಸುತ್ತಿದೆ

ಪ್ರ : ಕುಣಿಯುತ್ತಾ, ನಲಿಯುತ್ತಾ ಸ್ವಚ್ಚಂದವಾಗಿ ಬೆಳೆದವಳು ನಾನು. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರೂ ನನ್ನ ತವರಿನಲ್ಲಿ ಪ್ರೀತಿಗೆ ಕಡಿಮೆಯಿರಲಿಲ್ಲ. ಎಲ್ಲರೂ ಜೊತೆಯಾಗಿ ಹರಟುತ್ತಾ ಮಳೆಗಾಲದಲ್ಲಿ ಹಪ್ಪಳ ಸಂಡಿಗೆ ಸವಿದ ಆ ದಿನಗಳು ನೆನಪಿಂದ ದೂರವಾಗುವುದಿಲ್ಲ. ಜಾತ್ರೆಯಲ್ಲಿ ಬೆಂಡುಬತ್ತಾಸು, ಕಡ್ಲೆಪುರಿ ತಿನ್ನುತ್ತಾ ಗೆಳತಿಯರ ಜೊತೆ ತೊಟ್ಟಿಲಾಟ, ಕುದರೆಯಾಟವಾಡಿದ ಆ ದಿನಗಳು ಪುನಃ ನನ್ನ ಜೀವನದಲ್ಲಿ ಬರಲಿಕ್ಕಿಲ್ಲ. ಮದುವೆಯಾದ ಗಂಡ, ಪರಿವಾರ ಎಲ್ಲರೂ ಇಲ್ಲಿ ಇದ್ದರೂ ನನಗೆ ಒಂಟಿತನ ಕಾಡುತ್ತಿದೆ. ಮದುವೆಯಾಗಿ ಆರು ತಿಂಗಳಾದರೂ ಈ ಮನೆಯ ಸಂಪ್ರದಾಯಕ್ಕೆ ಹೊಂದಿಕೊಳ್ಳಲು, ಇಲ್ಲಿಯವರ ಮನಸ್ಸು ಅರಿಯಲು ಕಷ್ಟಪಡುತ್ತಿದ್ದೇನೆ. ಇಲ್ಲಿಯ ಶಿಸ್ತಿನ ವಾತಾವರಣ ಉಸಿರುಗಟ್ಟಿಸುತ್ತಿದೆ. ಸಿರಿವಂತ ಕುಟುಂಬ, ಒಳ್ಳೆಯ ಉದ್ಯೋಗದಲ್ಲಿರುವ ಸ್ಪುರದ್ರೂಪಿ ಪತಿ ಸಿಕ್ಕಿದ್ದಕ್ಕೆ ನಮ್ಮ ಊರಿನವರೆಲ್ಲ ನನ್ನ ಅದೃಷ್ಟದ ಬಗ್ಗೆ ಮೂಗಿನ ಮೇಲೆ ಬೆರಳಿಟ್ಟಿದ್ದರು. ಆದರೆ ಇಲ್ಲಿಯ ಬದುಕು ತುಂಬಾ ಯಾಂತ್ರಿಕ. ಕೆಲಸಕ್ಕೆ, ಅಡುಗೆಗೆ ಎಲ್ಲ ಜನ ಇದ್ದಾರೆ. ನಿಗದಿತ ಸಮಯಕ್ಕೆ ಎಲ್ಲರೂ ಡೈನಿಂಗ್ ಟೇಬಲ್‍ಗೆ ಬರಬೇಕು. ಊಟ, ತಿಂಡಿ ಮಾಡುವಾಗಲೂ ವ್ಯಾವಹಾರಿಕ ಮಾತು. ಮತ್ತೆ ಎಲ್ಲರೂ ಅವರವರ ಕೋಣೆ ಸೇರಿಕೊಳ್ಳುವುದು, ಅಲ್ಲಿಯೇ ಇರುವ ಟೀವಿ ನೋಡುವುದು ಬಿಟ್ಟರೆ ಬೇರೆ ಕೆಲಸವಿಲ್ಲ. ನನ್ನ ಪತಿ ನನ್ನನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ. ಆದರೆ ಅವರು ಬೆಳಿಗ್ಗೆ ಹೋದರೆ ಬರುವುದು ಸಂಜೆಗೆ. ಇಲ್ಲಿ ಮಹಿಳೆಯರು ಕೆಲಸಕ್ಕೆ ಹೋಗುವುದಿಲ್ಲ. ಅವರೇನಿದ್ದರೂ ಸಂಜೆ ಡ್ರೆಸ್ ಮಾಡಿಕೊಂಡು ಕ್ಲಬ್‍ಗೆ ಹೋಗುತ್ತಾರೆ ಅಷ್ಟೇ. ನನಗೆ ಇಲ್ಲಿಂದ ಮುಕ್ತಿ ಪಡೆಯಬೇಕು, ದಾರಿ ಬದಿಯಲ್ಲಿ ಸಿಗುವ ಪಾನಿಪುರಿ ಮೆಲ್ಲಬೇಕು, ಐಸ್‍ಕ್ರೀಂ ತಿನ್ನಬೇಕು, ಹಕ್ಕಿಯಂತೆ ಬಾನಲ್ಲಿ ತೇಲಬೇಕೆಂಬ ಆಸೆ. ಹೇಗೆ ಈ ಬಂಧನದಿಂದ ಪಾರಾಗಲಿ?

: ಬದಲಾದ ಪರಿಸರಕ್ಕೆ ಹೊಂದಿಕೊಳ್ಳುತ್ತಾ ಆ ಪರಿಸರವನ್ನೇ ಸಾಧ್ಯವಾದಷ್ಟು ನಮಗೆ ಅನುಕೂಲಕರವಾಗುವಂತೆ ಬದಲಿಸಿಕೊಳ್ಳಲು ಪ್ರಯತ್ನಿಸುತ್ತಾ ಆ ವಾತಾವರಣದಲ್ಲೇ ಸಂತೋಷ ಕಾಣುವುದೇ ಜೀವನ. ತವರು ಮನೆಯಲ್ಲಿ ಎಲ್ಲರ ಜೊತೆ ನಲಿದು, ಎಲ್ಲರ ಕಣ್ಮಣಿಯಾಗಿ ಬೆಳೆದ ಹುಡುಗಿಗೆ ಪತಿಯ ಮನೆಯ ಪರಿಸರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಕೆಲವು ಶ್ರೀಮಂತ ಕುಟುಂಬದಲ್ಲಿ ಎಲ್ಲ ಅನುಕೂಲವಿದ್ದರೂ ಅಲ್ಲಿ ಜೀವಂತಿಕೆ ಕಡಿಮೆ ಇರುತ್ತದೆ. ಎಲ್ಲರ ಸಂಬಂಧವೂ ವ್ಯಾವಹಾರಿಕವಾಗಿರುತ್ತದೆ. ಯಾವಾಗಲೂ ಬರೀ ಅಂತಸ್ತು ನೋಡಿ ಹೆಣ್ಣು ಕೊಡುವುದಕ್ಕಿಂತ ನಮ್ಮ ಹುಡುಗಿ ಅಲ್ಲಿ ಸುಖವಾಗಿರುತ್ತಾಳಾ ಅಂತ ಗಮನಿಸಿ ವಿವಾಹ ಮಾಡಿಕೊಡುವುದು ಉತ್ತಮ. ನಿಮ್ಮ ವಿಷಯದಲ್ಲಿ ಪತಿ ನಿಮ್ಮನ್ನು ಪ್ರೀತಿಸುತ್ತಿರುವುದರಿಂದ ನಿಮಗೆ ಅವರ ಸಹಾಯದಿಂದ ಅಲ್ಲಿಗೆ ಅಡ್ಜಸ್ಟ್ ಆಗಲು ಅಷ್ಟು ಕಷ್ಟವಾಗಬಾರದು. ನಿಮ್ಮ ಆಸೆ ಆಕಾಂಕ್ಷೆ, ನಿಮ್ಮ ಮನದಲ್ಲಾಗುವ ತಲ್ಲಣ ಎಲ್ಲವನ್ನೂ ನಿಮ್ಮ ಪತಿಯಲ್ಲಿ ಹಂಚಿಕೊಳ್ಳಿ. ಎಷ್ಟೆಂದರೂ ಅವರು ನಿಮ್ಮ ಜೀವನ ಸಂಗಾತಿ. ನೀವು ಖುಶಿಯಿಂದ ಇರುವುದು ಅವರಿಗೂ ಮುಖ್ಯ ತಾನೇ. ಸಾಧ್ಯವಿರುವಾಗ ಅವರು ನಿಮ್ಮ ಆಸೆಗೆ ಸ್ಪಂದಿಸಬಹುದು. ಅವರಿಲ್ಲದಾಗ ನಿಮಗಾಗುವ ಬೋರನ್ನು ನಿವಾರಿಸಲು ಬೇರೆ ದಾರಿ ಹುಡುಕಬಹುದು. ಅದೂ ಅಲ್ಲದೇ ನೀವಾಗಿಯೇ ಅವರ ಕುಟುಂಬದವರೆಲ್ಲರ ಜೊತೆ ಬೆರೆಯಲು ಪ್ರಯತ್ನಿಸಿ. ಸಂಜೆ ಹೊತ್ತು ವಾಕಿಂಗ್ ಹೋಗಿ, ಶಾಪಿಂಗ್ ಮಾಡಿ ಬನ್ನಿ, ಮನಸ್ಸು ಫ್ರೆಶ್ ಆಗುತ್ತದೆ. ಇಷ್ಟವಾದ ಹವ್ಯಾಸ ಬೆಳೆಸಿಕೊಳ್ಳಿ. ನಿಮ್ಮ ಸ್ನೇಹೀ ಗುಣದಿಂದಾಗಿ ಆ ಮನೆಯಲ್ಲೂ ಲವಲವಿಕೆ ತರಲು ಪ್ರಯತ್ನಿಸಿ. 

 

 

LEAVE A REPLY