ಹುಡುಗಿಯರೆಂದರೇ ಅಲರ್ಜಿಯಾಗಿಬಿಟ್ಟಿ

ಪ್ರ : ನನ್ನ ವಯಸ್ಸೀಗ 27. ಕಾಲೇಜು ದಿನಗಳಲ್ಲಿ ಎಲ್ಲರಂತೆ ನನಗೂ ಹುಡುಗಿಯರ ಬಗ್ಗೆ ಅಟ್ರಾಕ್ಷನ್ ಇತ್ತು. ಇಷ್ಟರವರೆಗೆ ಮೂರು ಹುಡುಗಿಯರು ನನ್ನ ಜೀವನದಲ್ಲಿ ಬಂದು ಹೋಗಿದ್ದಾರೆ. ಅವರೆಲ್ಲರ ಗುಣನಡತೆಯಿಂದ ನನಗೆ ಹುಡುಗಿಯರ ಬಗ್ಗೆಯೇ ಅಲರ್ಜಿ ಹುಟ್ಟಿಬಿಟ್ಟಿದೆ. ಒಬ್ಬಳು ಮಾತುಮಾತಿಗೆ ಅಳುಮುಂಜಿಯಾದರೆ ಇನ್ನೊಬ್ಬಳು ಬರೀ ಸ್ವಾರ್ಥಿಯಾಗಿದ್ದಳು. ಮತ್ತೊಬ್ಬಳು ಸಿಕ್ಕಾಪಟ್ಟೆ ಡಾಮಿನೇಟಿಂಗ್ ಇದ್ದಳು. ಅವರ ಜೊತೆ ಕೆಲವು ತಿಂಗಳು ಡೇಟಿಂಗ್ ಮಾಡುವಷ್ಟರಲ್ಲಿಯೇ ನನಗೆ ಸಾಕುಬೇಕಾಯಿತು. ನಾನು ಅವರ ಜೊತೆ ಬೇರೆ ಸಂಬಂಧ ಎಂದೂ ಹೊಂದಿರಲಿಲ್ಲ. ಆದ್ದರಿಂದ ನನಗೆ ಅವರ ಸಂಪರ್ಕ ಕಡಿದುಕೊಳ್ಳಲೂ ಕಷ್ಟವಾಗಿರಲಿಲ್ಲ. ಈಗ ಯಾರ ಜೊತೆಯೂ ರಿಲೇಶನ್ಶಿಪ್ ಇಟ್ಟುಕೊಳ್ಳದೇ ನನ್ನಷ್ಟಕ್ಕೆ ನಾನು ಹಾಯಾಗಿದ್ದೇನೆ. ಆದರೆ ಮನೆಯವರು ಕೇಳಬೇಕಲ್ಲ. ನನ್ನ ಮದುವೆಯ ತರಾತುರಿ ಅವರಿಗೆ. ದಿನಾ ಮದುವೆಯಾಗುವಂತೆ ತಲೆತಿನ್ನುತ್ತಿದ್ದಾರೆ. ಮದುವೆಯಾದ ನಂತರ ಹೆಂಡತಿಯನ್ನು ಸಂಭಾಳಿಸುವ ಬಗ್ಗೆ ಯೋಚಿಸಿದರೇ ತಲೆಬಿಸಿಯಾಗುತ್ತಿದೆ.  ಮದುವೆಯಾದರೆ ಅವಳ ಜೊತೆ ಹೇಗೆ ಮಾತಾಡಬೇಕೋ, ಅವಳನ್ನು ಎಷ್ಟು ಓಲೈಸಬೇಕೋ ಒಂದೂ ಅರ್ಥವಾಗುವುದಿಲ್ಲ. ಗರ್ಲ್‍ಫ್ರೆಂಡ್ ಜೊತೆ ಬ್ರೇಕ್‍ಅಪ್ ಮಾಡಿಕೊಂಡಂತೆ ಹೆಂಡತಿಯನ್ನು ಬಿಡಲು ಸಾಧ್ಯವಿಲ್ಲವಲ್ಲ. ಲೋಕಾಭಿರಾಮವಾಗಿ ಆಡಿದ ಮಾತೇ ಹುಡುಗಿಯರಿಗೆ ಕೋಪ ಬರಿಸುತ್ತದೆ. ಇಲ್ಲಾ ಕಣ್ಣೀರು ತರಿಸುತ್ತದೆ. ಅದಕ್ಕೆ ಮದುವೆಯಗುವುದೆಂದರೇ ಹೆದರಿಕೆಯಾಗುತ್ತದೆ. ನನಗೆ ಇಬ್ಬರು ತಮ್ಮಂದಿರು ಮಾತ್ರವಾದ್ದರಿಂದ ನನಗೀಗ ಆ ಕಷ್ಟವಿಲ್ಲ.  ಹೊಡೆದಾಡಿಕೊಳ್ಳುತ್ತಾ ಮತ್ತೆ ರಾಜಿಯಾಗುತ್ತಾ ನಾವೀಗ ಹಾಯಾಗಿದ್ದೇವೆ. ಈ ಸ್ವಾತಂತ್ರ್ಯವನ್ನೇ ನಾನು ಇಟ್ಟುಕೊಳ್ಳಲು ಆಶಿಸುತ್ತೇನೆ. ನಿಮ್ಮ ಅಭಿಪ್ರಾಯವೇನು?

ಉ : ಹುಡುಗಿಯರು ಜಾಸ್ತಿ ಸೆಂಟಿಮೆಂಟಲ್ ಅನ್ನುವುದು ನಿಜವಾದರೂ ಅದಕ್ಕಾಗಿ ಹುಡುಗಿಯರಿಂದಲೇ ದೂರವಿರುತ್ತೇನೆ, ಮದುವೆಯನ್ನೇ ಆಗುವುದಿಲ್ಲ ಅನ್ನುವುದೆಲ್ಲ ಅಸಂಬದ್ಧ. ನಿನ್ನ ತಾಯಿಯೂ ಒಬ್ಬಳು ಹೆಣ್ಣು ಅನ್ನುವುದನ್ನು ಮರೆಯಬೇಡ. ನಿನ್ನ ತಂದೆ ಅವರ ಜೊತೆ ಇಷ್ಟು ವರ್ಷ ಜೀವನ ಸಾಗಿಸಿಲ್ಲವೇ? ನೀವೆಲ್ಲ ಅಮ್ಮನ ಜೊತೆಯೇ ಇಷ್ಟು ಕಾಲ ಇದ್ದಿದ್ದು ತಾನೇ. ನಿನಗೆ ಸಹೋದರಿಯರಿಲ್ಲದಿರುವುದರಿಂದ ನಿಮ್ಮ ಜನರೇಶನ್ನಿನ ಹುಡುಗಿಯರ ಬಗ್ಗೆ ಹೆಚ್ಚು ನಿಮಗೆ ಗೊತ್ತಿಲ್ಲದೇ ಇದ್ದರೂ ಈಗ ಮೂರು ಹುಡುಗಿಯರ ಜೊತೆ ಡೇಟಿಂಗ್ ಮಾಡಿ ಅವರ ಮನಸ್ಥಿತಿಯ ಅರಿವಾದರೂ ನಿನಗೆ ಉಂಟಾಯಿತಲ್ಲ. ಹುಡುಗಿಯರ ಭಾವನೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಿದರೆ ಎಲ್ಲವೂ ಸರಿಹೋಗುತ್ತದೆ. ಎಲ್ಲ ಹುಡುಗಿಯರೂ ಒಂದೇ ತರದ ಗುಣಸ್ವಭಾವ ಹೊಂದಿರುವುದಿಲ್ಲ. ಮೊದಲು ನಿನಗೆ ಗರ್ಲ್‍ಫ್ರೆಂಡಾಗಿದ್ದ ಹುಡುಗಿಯರ ನೇಚರ್ ನಿನಗೆ ಹಿಡಿಸಿಲ್ಲ ಅಂತ ಹೆಣ್ಣು ಜಾತಿಯ ಬಗ್ಗೆಯೇ ಹೀಗೆ ಅಲರ್ಜಿ ಬೆಳೆಸಿಕೊಂಡರೆ ಹೇಗೆ? ನಿನ್ನ ಸ್ವಭಾವಕ್ಕೆ ಹೊಂದಬಲ್ಲ ಹುಡುಗಿಯನ್ನೇ ಹುಡುಕು. ಸ್ವಲ್ಪ ದಿನ ಒಡನಾಡಿದ ನಂತರವೇ ಕಮಿಟ್ ಆಗು. ಮದುವೆಯೇ ಬೇಡ ಅಂತ ಈಗ ಅನಿಸಿದರೂ ಮುಂದೆ ವಯಸ್ಸು ಇಳಿದ ನಂತರ ಒಂಟಿತನ ಭಾದಿಸಬಹುದು. ಜೀವನವೇ ಬೋರ್ ಆಗಬಹುದು. ಸಿಹಿ-ಕಹಿ ಎಲ್ಲವೂ ಇದ್ದರೇನೇ ಜೀವನ ಚೆನ್ನ. ಬೇಕಿದ್ದರೆ ಮದುವೆಯನ್ನು ಸ್ವಲ್ಪ ವರ್ಷ ಮುಂದೂಡಬಹುದು.