ಬಂಗಾಲದ ದಂಗೆಗಳ ಸತ್ಯಾಸತ್ಯತೆ

ಪಶ್ಚಿಮ ಬಂಗಾಲದಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿದ್ದು ಮಾಧ್ಯಮಗಳು ಇದನ್ನು ವರದಿ ಮಾಡುತ್ತಿಲ್ಲ.

  • ಸ್ವಾತಿ ಸೆನ್ ಗುಪ್ತಾ

ಪಶ್ಚಿಮ ಬಂಗಾಲದಲ್ಲಿ ಡಿಸೆಂಬರ್ 12ರಂದು ಮುಸ್ಲಿಂ ಸಮುದಾಯಗಳು ಮಿಲಾದ್ ಉನ್ ನಬಿ ಹಬ್ಬವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ನಡೆದ ಹಿಂದೂ ಮುಸ್ಲಿಂ ಕೋಮು ಗಲಭೆಗಳು ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದೆ. ಗಲಭೆ ಪ್ರದೇಶಗಳಿಗೆ ಪತ್ರಕರ್ತರಿಗೆ ಪ್ರವೇಶವನ್ನೂ ನೀಡಲಾಗುತ್ತಿಲ್ಲ ಎಂದು ಮಾಧ್ಯಮಗಳು ಆರೋಪಿಸಿವೆ. ಈ ಗಲಭೆಗಳಲ್ಲಿ ನೂರಾರು ಅಂಗಡಿ ಮುಗ್ಗಟ್ಟುಗಳು ಧ್ವಂಸವಾಗಿವೆ. ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಹಲವಾರು ಮನೆಗಳನ್ನು ಲೂಟಿ ಮಾಡಲಾಗಿದೆ. 51 ಜನರನ್ನು ಈವರೆಗೆ ಬಂಧಿಸಲಾಗಿದೆ. ದುಷ್ಕರ್ಮಿಗಳು ಅಂಗಡಿಗಳನ್ನು, ಸೈಕಲ್ ಶಾಪುಗಳನ್ನು ಮತ್ತು ಔಷಧಿ ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ. ಸಂಕ್ರೇಲ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ದೆವಾನ್ ಘಾಟ್ ಮತ್ತು ಧುಲಗೋರಿ ಗ್ರಾಮಗಳಲ್ಲಿ ಬಡ ಮತ್ತು ಮಧ್ಯಮವರ್ಗಗಳ ಮುಸ್ಲಿಮರು ಹೆಚ್ಚಾಗಿದ್ದಾರೆ. ಬಹುತೇಕ ಮುಸ್ಲಿಮರು ಸಣ್ಣ ಪ್ರಮಾಣದ ವ್ಯಾಪಾರದಲ್ಲಿ ತೊಡಗಿದ್ದಾರೆ. ಈ ಗ್ರಾಮಗಳಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳು ಸೌಹಾರ್ದತೆಯಿಂದಲೇ ಬಾಳುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಹಬ್ಬದ ದಿನ ಮುಸ್ಲಿಮರು ಹಿಂದೂಗಳ ಮನೆಗಳೇ ಹೆಚ್ಚಾಗಿದ್ದ ರಸ್ತೆಗಳಲ್ಲಿ ಮೆರವಣಿಗೆ ಹೊರಡಲು ಸಜ್ಜಾಗಿದ್ದರು. ಆದರೆ ಸ್ಥಳೀಯ ಹಿಂದೂಗಳು ಇದನ್ನು ವಿರೋಧಿಸಿದಾಗ, ಪೂರ್ವಸಜ್ಜಿತರಾಗಿ ಬಂದಿದ್ದ ಕಿಡಿಗೇಡಿ ಯುವಕರು ಮನೆಗಳ ಮೇಲೆ ಬಾಂಬ್ ಎಸೆದು ದಾಂಧಲೆ ಆರಂಭಿಸಿದರು ಎಂದು ಸ್ಥಳೀಯ ನಿವಾಸಿ ದಾಸ್ ಹೇಳುತ್ತಾರೆ. ಈ ಪ್ರದೇಶದಲ್ಲಿ ಇನ್ನೂ ಪ್ರಕ್ಷುಬ್ಧ ವಾತಾವರಣ ಇದ್ದು ಪತ್ರಕರ್ತರಿಗೆ ಫೋಟೋ ತೆಗೆಯಲೂ ಅವಕಾಶ ನೀಡಲಾಗುತ್ತಿಲ್ಲ. ಮಾರುಕಟ್ಟೆಯ ಹೊರಗೆ, ಸಣ್ಣ ಗಲ್ಲಿಗಳಲ್ಲಿ ಹತ್ತಾರು ಪೊಲೀಸರ  ಪಹರೆ ಕಂಡುಬರುತ್ತದೆ. ಗಲಭೆಯ ನಂತರ ಈ ಗಲ್ಲಿಗಳಲ್ಲಿ ಹಿಂದೂಗಳೊಡನೆ ಸೌಹಾರ್ದತೆಯಿಂದ ಬಾಳುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಹಿಂದೂ ಮತಾಂಧರು ಹೊಡೆದೋಡಿಸಿದ್ದಾರೆ. ನಕಲಿ ಆಭರಣ ತಯಾರಿಸುವ ಕಾರ್ಖಾನೆ ಮತ್ತು ಹಲವು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮುಸ್ಲಿಮರು ಮೆರವಣಿಗೆ ಹೊರಟಿದ್ದ ಸಂದರ್ಭದಲ್ಲಿ ತಮ್ಮ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ ಹಿಂದೂಗಳು ಮುಸ್ಲಿಂ ಕುಟುಂಬಗಳನ್ನು ಭೀತಿಗೊಳಪಡಿಸಿವೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.

ಪಶ್ಚಿಮ ಬಂಗಾಲದಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿದ್ದು ಮಾಧ್ಯಮಗಳು ಇದನ್ನು ವರದಿ ಮಾಡುತ್ತಿಲ್ಲ. ದಕ್ಷಿಣ ಪರಗಣದಲ್ಲಿರುವ ಮೋಗ್ರಘಾಟ್, ರಾಂಪುಹಾರ್, ಬೀರ್‍ಭೂಮ್‍ನ ಮಯೂರೇಶ್ವರ್, ಪಶ್ಚಿಮ ಮಿಡ್ನಾಪುರದ ಖರಗಪುರ್, ಚಿನ್ಸುರಾ, ಹೂಗ್ಲಿ ಜಿಲ್ಲೆಯ ಚಂದನನಗರ ಮತ್ತಿತರ ಪ್ರದೇಶಗಳಲ್ಲಿ ಕೋಮುಗಲಭೆಗಳು ಸಂಭವಿಸಿವೆ. ಈ ಕೋಮುಗಲಭೆಗಳನ್ನು ವರದಿ ಮಾಡುವುದರಿಂದ ಕೋಮುಗಲಭೆ ಉಲ್ಬಣಿಸುತ್ತದೆ ಎಂಬ ಪ್ರತೀತಿ ಇರುವುದರಿಂದ ಮಾಧ್ಯಮಗಳು ವರದಿ ಮಾಡುವುದಿಲ್ಲ ಎನ್ನುತ್ತಾರೆ ಸುದ್ದಿವಾಹಿನಿಯ ಸಂಪಾದಕ ಅನಿರ್ಬನ್ ಚೌಧರಿ. ರಾಜಕೀಯ ಹಿಂಸಾಚಾರವನ್ನು ವರದಿ ಮಾಡುವ ಮಾಧ್ಯಮಗಳು ಧಾರ್ಮಿಕ ಕೋಮು ಗಲಭೆಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತವೆ ಎಂದು ಚೌಧರಿ ಆರೋಪಿಸುತ್ತಾರೆ. ಗಲಭೆಗಳಲ್ಲಿ ಧ್ವಂಸಗೊಂಡ ಮನೆಗಳನ್ನು ಉಲ್ಲೇಖಿಸಿ ಹೆಸರುಗಳನ್ನು ಪ್ರಕಟಿಸಿದರೂ ಕೋಮು ಗಲಭೆಯಾಗಿದೆ ಎಂದು ವರದಿ ಮಾಡುವುದಿಲ್ಲ ಎನ್ನುತ್ತಾರೆ ಈ ಸಮಯ್ ಸಂಪಾದಕ ಸುಮನ್ ಚಟ್ಟೋಪಾಧ್ಯಾಯ. ಪರಿಸ್ಥಿತಿಯನ್ನು ನಿಭಾಯಿಸಲು ಮಮತಾ ಬ್ಯಾನರ್ಜಿ ಸರ್ಕಾರ ಹರಸಾಹಸ ಪಡುತ್ತಿದ್ದು ಕೊಲ್ಕತ್ತಾದ ಕ್ಷಿಪ್ರ ಕಾರ್ಯಪಡೆಗಳು ಹೌರಾ ಜಿಲ್ಲೆಯಲ್ಲಿ ಬೀಡುಬಿಟ್ಟಿವೆ. ಸತ್ಯಶೋಧನಾ ಸಮಿತಿಯ ರೂಪದಲ್ಲಿ ಗಲಭೆ ಉಂಟಾದ ಸ್ಥಳಗಳಿಗೆ ಭೇಟಿ ನೀಡಲು ಹೊರಟಿದ್ದ ಬಿಜೆಪಿ ತಂಡಕ್ಕೆ ತಡೆಒಡ್ಡಲಾಗಿದೆ. ಹತ್ತು ದಿನಗಳ ನಂತರವೂ ಪರಿಸ್ಥಿತಿ ಇನ್ನೂ ಪ್ರಕ್ಷುಬ್ಧವಾಗಿದ್ದು ಮನೆ ಮತ್ತು ಅಂಗಡಿಗಳನ್ನು ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ತಲಾ 35 ಸಾವಿರ ರೂ ಪರಿಹಾರ ನೀಡಿದೆ.