ಸ್ವಲ್ಪ ಸಮಯ ಫ್ರೀಯಾಗಿರುವ ಆಸೆ

ಪ್ರ : ನನಗೀಗ 28 ವರ್ಷ. ನನ್ನ ಜೊತೆಗಾತಿಯೂ ನನ್ನ ವಯಸ್ಸಿನವಳೇ. ನಾವಿಬ್ಬರೂ ಚಿಕ್ಕಂದಿನಿಂದಲೂ ಜೊತೆಗಾರರು. ಇನ್ನೆರಡು ವರ್ಷದಲ್ಲಿ ಮದುವೆಯನ್ನೂ ಆಗಬೇಕೆಂದಿದ್ದೇವೆ. ಆದರೆ ಮದುವೆಯಾಗುವ ಮೊದಲು ನಾನು ಸ್ವಲ್ಪ ಸಮಯ ಫ್ರೀಯಾಗಿ ಒಬ್ಬನೇ ನನಗೆ ಬೇಕೆಂದ ಹಾಗೆ ಕಳೆಯಬೇಕೆಂದಿದ್ದೇನೆ. ತಂದೆ ನನ್ನ ಹದಿನಾಲ್ಕನೇ ವಯಸ್ಸಿನಲ್ಲೇ ತೀರಿ ಹೋದರು. ಅವರು ಪ್ರಾರಂಭಿಸಿದ ಕಿರಾಣಿ ಅಂಗಡಿಯನ್ನು ನಾನು ಆವಾಗಿಂದಲೇ ನೋಡಿಕೊಳ್ಳುತ್ತಿದ್ದೆ. ಕಷ್ಟಪಟ್ಟು ತಕ್ಕಮಟ್ಟಿನ ಶಿಕ್ಷಣವನ್ನೂ ಮುಂದುವರಿಸಿದೆ. ತಂಗಿಯರಿಬ್ಬರ ಮದುವೆಯ ಜವಾಬ್ದಾರಿಯೂ ನನ್ನ ಮೇಲಿತ್ತಾದ್ದರಿಂದ ನನ್ನದೇ ಆದ ಸಮಯ ನನಗೆ ಸಿಗಲೇ ಇಲ್ಲ. ಈಗ ತಂಗಿಯರ ಮದುವೆಯೂ ಆಗಿ ಸ್ವಲ್ಪ ನಿರಾಳವಾಗಿದ್ದೇನೆ. ನನ್ನೆಲ್ಲ ಕಷ್ಟದ ಸಮಯದಲ್ಲಿ ಆಕೆ ನನಗೆ ಸಹಕಾರಿಯಾಗಿದ್ದಳು. ಆದ್ದರಿಂದ ಅವಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಆದರೆ ನಾನು ಇಷ್ಟು ವರ್ಷ ಎಲ್ಲರಿಗಾಗಿ ಬದುಕಿದೆ. ಒಂದು ವರ್ಷವಾದರೂ ಯಾವ ಜಂಜಾಟವಿಲ್ಲದೇ ಒಬ್ಬನೇ ಇರಬೇಕೆಂದಿದ್ದೇನೆ. ಮದುವೆಯಾದ ನಂತರ ಸಂಸಾರ ತಾಪತ್ರಯ ಇದ್ದಿದ್ದೇ. ಈಗ ನನಗೆ ಬೇಕಾದ ಕಡೆ ಟೂರ್ ಮಾಡಿಕೊಂಡು ಕೆಲವೊಮ್ಮೆ ಸ್ನೇಹಿತರ ಜೊತೆ ಸಮಯದ ಪರಿವಿಲ್ಲದೇ ಹಗಲೂ-ರಾತ್ರಿ ಕಳೆಯಬೇಕೆಂದಿದ್ದೇನೆ. ನನ್ನ ಬಿಸಿನೆಸ್ಸನ್ನು ಕೆಲಸಮಯ ನನ್ನ ಅಸಿಸ್ಟೆಂಟ್ ಮೇಲೇ ಬಿಟ್ಟು ಹಾಯಾಗಿರುವ ಆಸೆ. ಈ ಒಂದು ವರ್ಷ ಯಾರೂ ನನ್ನನ್ನು ಕೇಳುವವರಿರಬಾರದು. ಅದಕ್ಕೆ ನನ್ನ ಹುಡುಗಿ ಒಪ್ಪಿಗೆ ಕೊಡುತ್ತಿಲ್ಲ. ನನ್ನ ಆಸೆ ತಪ್ಪಾ?

ಉ : ಪ್ರತಿಯೊಬ್ಬ ಮನುಷ್ಯರಿಗೂ ತಮ್ಮ ಜೀವಿತಾವಧಿಯ ಒಂದಲ್ಲ ಒಂದು ಸಮಯ ಹೀಗೇ ಅನಿಸುತ್ತದೆ. ಎಲ್ಲಾ ಜಂಜಾಟ ಬಿಟ್ಟು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡೋಣ ಅಂತಲೂ ಕೆಲವರಿಗೆ ಅನಿಸುವುದುಂಟು. ಆದರೆ ಅದು ಅಷ್ಟು ಸುಲಭದ ಮಾತಲ್ಲ. ನೀವಂತೂ ನಿಮ್ಮ ಟೀನೇಜನ್ನು ಕಷ್ಟದಲ್ಲೇ ಕಳೆದಿರಿ. ಅಷ್ಟು ಚಿಕ್ಕ ವಯಸ್ಸಿಗೆ ನಿಮಗೆ ಕುಟುಂಬದ ಜವಾಬ್ದಾರಿಯೂ ಬಿದ್ದಿದ್ದು ನಿಮ್ಮ ದುರಾದೃಷ್ಟ. ಆದರೆ ಆ ಸಮಯದಲ್ಲಿ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ಜೊತೆಗಾತಿಗೆ ನೀವು ಎಷ್ಟು ಕೃತಜ್ಞರಾಗಿದ್ದರೂ ಕಡಿಮೆಯೇ. ಅವಳೂ ನಿಮ್ಮ ಓರಗೆಯವಳೇ ಆದ್ದರಿಂದ ಅವಳ ವಯಸ್ಸಿನ ಹುಡುಗಿಯರಿಗೆಲ್ಲ ಈಗ ಮದುವೆಯಾಗಿ ಮಕ್ಕಳಾಗಿರಬಹುದು. ಆದರೂ ಅವಳು ಧೃತಿಗೆಡದೇ ನಿಮಗಾಗಿ ಕಾಯುತ್ತಿದ್ದಾಳೆ. ಹಾಗಿರುವಾಗ ಈಗ ನೀವು ಮಾತ್ರ ಸ್ವಾರ್ಥಿಗಳಾಗಿ ಅವಳನ್ನು ಒಬ್ಬಂಟಿಯಾಗಿ ಬಿಟ್ಟು ದೇಶ ತಿರುಗಲು ಹೋಗುತ್ತೇನೆ ಅಂತೀರಲ್ಲಾ ಅದು ನ್ಯಾಯವಾ? ನಿಮಗೆ ಅಷ್ಟು ಹೋಗಲೇ ಬೇಕೆನಿಸಿದರೆ ಹೆಚ್ಚೆಂದರೆ ಒಂದು ತಿಂಗಳು ಒಬ್ಬನೇ ತಿರುಗಾಡಿ ಬರಬಹುದು. ಬೇಕೆನಿಸಿದರೆ ವಾರಕ್ಕೊಮ್ಮೆ ಸ್ನೇಹಿತರ ಜೊತೆ ಕಳೆಯಲು ಆಕೆ ಒಪ್ಪಬಹುದು. ಅದೂ ಅಲ್ಲದೇ ನೀವು ಇಷ್ಟು ಸಮಯ ಕಟ್ಟಿ ಬೆಳೆಸಿದ ಬಿಸಿನೆಸ್ಸನ್ನು ಸಂಪೂರ್ಣ ಮರೆತು ಒಂದು ವರ್ಷ ನಿಮ್ಮಷ್ಟಕ್ಕೇ ನೀವಿದ್ದರೆ ಅಲ್ಲಿ ಏನಾದರೂ ಗೋಲ್ಮಾಲ್ ಆದರೆ ಏನು ಮಾಡುತ್ತೀರಿ? ಹೇಳುವುದು ಸುಲಭ. ನೀವು ಎಲ್ಲ ಬಿಟ್ಟು ದೇಶ ತಿರುಗಲು ಹೋದರೂ ಇಲ್ಲಿಯ ಮೋಹ ಬಿಡುವುದು ಅಷ್ಟು ಸುಲಭವಲ್ಲ. ಕೆಲವೇ ದಿನಗಳಲ್ಲಿ ಓಡಿಬರುತ್ತೀರಿ. ಜೀವನ ಅಂದರೆ ಅಷ್ಟೇ. ಈಸಬೇಕು, ಈಸಿ ಜಯಿಸಬೇಕು. ನನ್ನ ಕೇಳಿದರೆ ಆದಷ್ಟು ಬೇಗ ಆಕೆಯನ್ನು ಮದುವೆಯಾಗಿ ಮಧ್ಯೆ ಮಧ್ಯೆ ಪುರುಸೊತ್ತು ಮಾಡಿಕೊಂಡು ಅವಳನ್ನೂ ಕರೆದುಕೊಂಡು ಟೂರ್ ಹೋಗುವುದು ಒಳ್ಳೆಯದು.

LEAVE A REPLY