ಕಾಂಗ್ರೆಸ್, ಬಿಜೆಪಿ ಪಾಳಯಗಳಲ್ಲಿ ಭರದಿಂದ ನಡೆಯುತ್ತಿದೆ ಚುನಾವಣಾಪೂರ್ವ ತಯಾರಿ

ಬೆಂಗಳೂರು : ಕರ್ನಾಟಕದಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಗೆಲ್ಲಬೇಕೆಂಬ ಹಠದಲ್ಲಿರುವ ಆಡಳಿತ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡೂ ತಮ್ಮ ತಮ್ಮ ರಣತಂತ್ರ ಸಿದ್ಧಪಡಿಸುತ್ತಿವೆ.  ಬಿಜೆಪಿಯ ಚುನಾವಣಾ ಸಿದ್ಧತೆಯ ಉಸ್ತುವಾರಿಯನ್ನು ಸ್ವತಃ ಪಕ್ಷಾಧ್ಯಕ್ಷ ಅಮಿತ್ ಶಾ ವಹಿಸಲಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಈ ನಿಟ್ಟಿನಲ್ಲಿ ಅದರ ಅಧ್ಯಕ್ಷ ರಾಹುಲ್ ಗಾಂಧಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.

ಸಂಕ್ರಾಂತಿ ಕಳೆದ ಕೂಡಲೇ ಎರಡು ಪಕ್ಷಗಳ ಪ್ರಮುಖ ನಾಯಕರೂ ಚುನಾವಣಾ ರಣತಂತ್ರವನ್ನು ಅಂತಿಮಗೊಳಿಸಲಿದ್ದಾರೆಂಬ ಬಗ್ಗೆ ಮಾಹಿತಿಯಿದೆ. ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಚುನಾವಣೆ ಗೆಲ್ಲಲೇ ಬೇಕೆಂಬ ಹಠವಿದ್ದರೆ, ಬಿಜೆಪಿ ತನ್ನ ಗುಜರಾತ್ ಮತ್ತು ಹಿಮಾಚಲ ಗೆಲುವಿನ ಸರಣಿಯನ್ನು ಕರ್ನಾಟಕದಲ್ಲೂ ಮುಂದುವರಿಸಲು ಹಾತೊರೆಯುತ್ತಿದೆ.

ರಾಜಧಾನಿ ದೆಹಲಿಯಲ್ಲಿ ರಾಹುಲ್ ಅವರು ಜನವರಿ 13ರಂದು ಸಭೆ ಕರೆದಿದ್ದು, ಇದರ ನಂತರ ಪಕ್ಷದ ಸಂವಹನ, ಸಾಮಾಜಿಕ ಜಾಲತಾಣ ಹಾಗೂ ಸಂಶೋಧನಾ ಘಟಕಗಳು ಕರ್ನಾಟಕದಲ್ಲಿ ಬೀಡು ಬಿಡಲಿವೆ. ಎಐಸಿಸಿ ಸಂವಹನಾ ಘಟಕದ ಸಂಚಾಲಕಿ ಪ್ರಿಯಾಂಕ ಚತುರ್ವೇದಿ ಹಾಗೂ ಸಂಶೋಧನಾ ಘಟಕದ ಮುಖ್ಯಸ್ಥ ರಾಜೀವ್ ಗೌಡ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ.

ಪಕ್ಷದ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆ ರಮ್ಯಾ ಕೂಡ ತಮ್ಮ ಸಂಪೂರ್ಣ ಗಮನವನ್ನು ಕರ್ನಾಟಕದಲ್ಲಿ ಕೇಂದ್ರೀಕರಿಸಿಕೊಳ್ಳಲಿದ್ದಾರೆ. ಸಂಸದ ಹಾಗೂ ಆಲ್ ಇಂಡಿಯಾ ಪ್ರೊಫೆಶನಲ್ಸ್ ಕಾಂಗ್ರೆಸ್ ಅಧ್ಯಕ್ಷ ಶಶಿ ತರೂರ್ ಕೂಡ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ರಾಹುಲ್ ಅವರ ಚುನಾವಣಾ ರಣತಂತ್ರ ಸಿದ್ಧಪಡಿಸುವ ತಂಡ ಬೆಂಗಳೂರಿಗೆ ಶೀಘ್ರದಲ್ಲಿಯೇ ಆಗಮಿಸಲಿದೆಯೆನ್ನಲಾಗಿದೆ.

ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ನೇತೃತ್ವದ 40 ಮಂದಿ ಸದಸ್ಯರ ತಂಡವು ಬೆಂಗಳೂರಿಗೆ ಬಂದು ಫೆಬ್ರವರಿಯಿಂದ ಮಾರ್ಚ್ ತನಕ ಠಿಕಾಣಿ ಹೂಡಲಿದೆ. ಮುಂದಿನ ತಿಂಗಳಿಂದ ಅಮಿತ್ ಶಾ ಅವರೇ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಕೋರ್ ತಂಡದಲ್ಲಿ ಪ್ರಮುಖರೆಂದರೆ ಭೂಪೇಂದ್ರ ಯಾದವ್. ರಾಜ್ಯಸಭಾ ಸದಸ್ಯರೂ ಆಗಿರುವ ಅವರನ್ನು ಬಿಜೆಪಿಯ ಪುಟ ಪ್ರಮುಖ ಕಾರ್ಯಕ್ರಮದ ಉಸ್ತುವಾರಿಯನ್ನಾಗಿ ನೇಮಕಗೊಳಿಸುವ ಸೂಚನೆಯಿದೆ.

ಶಾ ತಂಡದಲ್ಲಿ ತಮ್ಮ ಸಂಘಟನಾ ಚತುರತೆಗೆ ಹೆಸರಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹಾಗೂ ಪ್ರಧಾನಿಯ ಸಮೀಪವರ್ತಿ ಓಂ ಮಾಥುರ್ ಕೂಡ ಇದ್ದಾರೆ. ಇನೊಬ್ಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರು ಪಕ್ಷ ಹಾಗೂ ಆರೆಸ್ಸೆಸ್ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸಲಿದ್ದಾರೆ.

 

 

LEAVE A REPLY