ಬಿಜೆಪಿಯ ತಿಂಗಳೆ ವಿರುದ್ಧ ದೂರೇ ಹೆಚ್ಚು

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಪ್ರಭಾರಿ ಉಸ್ತುವಾರಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಉ ಕ ಜಿಲ್ಲೆಯಲ್ಲಿ ಬೀದಿ ರಂಪಾಟ ನಡೆಸಿರುವುದು ಒಂದೆಯಾಡೆದರೆ, ಉಡುಪಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಅವಧಿಯಲ್ಲಿ ಹಾಗೂ ಅವಧಿ ಮುಗಿದ ನಂತರ ಉಡುಪಿ ಜಿಲ್ಲೆಯ ಎಲ್ಲಾ ಬಿಜೆಪಿ ಮಂಡಲ ಅಧ್ಯಕ್ಷರ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಹಾಗೂ ಬಿಜೆಪಿಯ ಹಿರಿಕಿರಿಯ ಮುಖಂಡರ ನಿಷ್ಠುರ ಕಟ್ಟಿಕೊಂಡಿರುವ ಅಂಶ ಇದೀಗ ಉಡುಪಿಯ ಬಿಜೆಪಿ ಪಾಳಯದಲ್ಲಿ ಬಯಲಾಗಿದೆ.

ಒಂದೂವರೆ ವರ್ಷದ ಹಿಂದೆ ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷನಾಗಿದ್ದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ತನ್ನ ಅಧಿಕಾರದ ಅವಧಿಯಲ್ಲಿ ಪಕ್ಷವನ್ನು ಕಟ್ಟಿಬೆಳೆಸಿದ ಹಿರಿಯರನ್ನು ಕಡೆಗಣಿಸಿದ್ದಾರೆ. ಅಲ್ಲದೇ ಉಡುಪಿ ಜಿಲ್ಲೆಯ ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಸಿರುವುದು, ಹಣಕಾಸಿನ ವಿಚಾರದಲ್ಲಿ ಗೋಲ್ಮಾಲ್ ನಡೆಸಿರುವುದು ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯ ಹಿಂದೆ ನಿಂತುಕೊಂಡು ಆಕೆಯ ಹೆಸರನ್ನು ಕೆಡಿಸಲು ಇದೇ ತಿಂಗಳೆ ಕಾರಣ ಎಂಬ ಆರೋಪವೂ ಬಿಜೆಪಿ ವಲಯದಿಂದ ಕೇಳಿಬಂದಿದೆ.

ತನ್ನನ್ನು ಬಿಜೆಪಿಯಲ್ಲಿ ಬೆಳೆಸಿದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾ ಬಿಜೆಪಿ ಹೈಕಮಾಂಡ್ ಸೋಮಶೇಖರ್ ಭಟ್ ಹಾಗೂ ಗುಜ್ಜಾಡಿ ಪ್ರಭಾಕರ್ ನಾಯಕಗೂ ಹಿಂಸೆ ನೀಡಿ ಅವರನ್ನೂ ಮುಗಿಸಲೂ ಸಂಚು ಹೂಡಿ ಕೊನೆಗೆ ವಿಫಲವಾದ ದೂರು ಕೂಡಾ ಬಿಜೆಪಿ ವಲಯದಿಂದ ಕೇಳಿ ಬಂದಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಇತ್ತೀಚೆಗೆ ಬಿಜೆಪಿಯು ನಡೆಸಿದ ಆಂತರಿಕ ಚುನಾವಣೆಯಲ್ಲಿ ಸುಮಾರು 10 ಸಾವಿರ ಮತದಾರರಿದ್ದು, ತಿಂಗಳೆ ವಿಕ್ರಮಾರ್ಜುನ ಸಹಿತ ಐವರು ನಾಯಕರು ಕಣದಲ್ಲಿದ್ದರು, ಆದರೆ ತಿಂಗಳೆ 3 ಅಂಕೆಯನ್ನೂ (100) ದಾಟಿಲ್ಲ.

ಮುಖವನ್ನು ನೆಲಕ್ಕೆ ಹಾಕಿಕೊಂಡು ಮಾತನಾಡುತ್ತಿರುವ ತಿಂಗಳೆ, ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಬಂದರೂ ಯಾರನ್ನೂ ಒಳಗೆ ಕರೆಸಿಕೊಳ್ಳುತ್ತಿಲ್ಲವಾಗಿದ್ದು, ಕೇವಲ ಉಡುಪಿ ನಗರಸಭಾ ಬಿಜೆಪಿ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹಾಗೂ ನಾಮಕಾಸ್ತೆ ನಾಯಕ ಅಂಡಾರು ದೇವಿಪ್ರಸಾದ್ ಶೆಟ್ಟಿ ಎಂಬವರನ್ನು ಮಾತ್ರ ತಿಂಗಳೆ ಎಡಬಲದಲ್ಲಿ ಇಟ್ಟುಕೊಂಡಿದ್ದರು. ಎಂಬ ಆರೋಪವೂ ಉಡುಪಿ ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ.

ಭೂಗತ ಡಾನ್ (ಕೆಲ ವರ್ಷದ ಹಿಂದೆ ಶೂಟೌಟಿನಲ್ಲಿ ಸಾವನ್ನಪ್ಪಿದ) ಶರದ್ ಶೆಟ್ಟಿಯ ಹೆಂಡತಿಯು ತಿಂಗಳೆಯ ಅಕ್ಕನಾಗಿದ್ದು, ಅವರ ಮನೆಯಿಂದಲೂ ಅಕ್ಕ ತಿಂಗಳೆಯನ್ನು ಹೊರದಬ್ಬಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಬೆಂಗಳೂರು ಬಿಜೆಪಿ ಕಚೇರಿಯಲ್ಲಿಯೂ ತಿಂಗಳೆಯನ್ನು ಹೊರಗಿಡಲು ಬಿಜೆಪಿ ಹೈಕಮಾಂಡ್ ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ತನ್ನ ಹಳೇ ಚಾಳಿ ಮುಂದುವರಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೀದಿ ರಂಪಾಟ ನಡೆಸಿರುವ ತಿಂಗಳೆಯನ್ನು ಬಿಜೆಪಿಯಿಂದ ಉಚ್ಛಾಟಿಸಬೇಕೆಂಬ ಆಗ್ರಹ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲಾ ಬಿಜೆಪಿ ವಲಯದಲ್ಲಿ ವ್ಯಾಪಕವಾಗಿ ಕೇಳಿಬಂದಿದೆ.

 

LEAVE A REPLY