ಮೆದುಳು ಚುರುಕಾಗಿಸಿ

ಬದುಕು ಬಂಗಾರ-119

ಮಾನವನ ಮೆದುಳು ಒಂದು ಅದ್ಭುತವೇ ಸರಿ. ಈ ಮೆದುಳು ಚುರುಕಾದಲ್ಲಿ ನಮಗೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಮೆದುಳಿಗೆ ಚುರುಕು ಮುಟ್ಟಿಸಿ ನೀವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಸುಲಭ ಉಪಾಯಗಳು ಇಲ್ಲಿವೆ.

ಸದ್ದುಗದ್ದಲವಿಲ್ಲದ ಸ್ಥಳವನ್ನು ಆಯ್ಕೆ ಮಾಡಿ : ಸದ್ದು ಗದ್ದಲ ಮನಸ್ಸಿಗೆ ಕಿರಿಕಿರಿ ಸೃಷ್ಟಿಸಬಹುದು. ಶಾಂತ ಪರಿಸರವನ್ನು ಆಯ್ಕೆ ಮಾಡಿ. ಅಲ್ಲಿ ನಿಮ್ಮ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿಕೊ

ಒತ್ತಡವನ್ನು ಕಡಿಮೆಗೊಳಿಸಿ : ಒತ್ತಡ ನಿಮ್ಮನ್ನು ಕಾಡಿದಾಗ ಮೆದುಳು ಸರಿಯಾಗಿ ಯೋಚಿಸದು. ಇದರಿಂದಾಗಿ ನಿಮ್ಮ ಮನಸ್ಸು ತಲ್ಲಣಗೊಂಡಿರಲೂಬಹುದು ಹಾಗೂ ವಿವಿಧ ಯೋಚನಾಲಹರಿಗಳಲ್ಲಿ ಹೊಯ್ದಾಡಬಹುದು. ಧ್ಯಾನ ಮಾಡಿ ಮನಸ್ಸನ್ನು ಶಾಂತಗೊಳಿಸಿ.

ಹಾಗೆಯೇ ಸುತ್ತಾಡಿಕೊಂಡು ಬನ್ನಿ : ನಿಮ್ಮ ಮೆದುಳು ಚುರುಕಾಗಿಲ್ಲ, ಯಾವ ನಿರ್ಧಾರವನ್ನೂ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನಿಮಗನಿಸಿದರೆ ಚಿಂತೆಯಿಲ್ಲ. ಹಾಗೆಯೇ ಅಡ್ಡಾಡಿಕೊಂಡು ಬನ್ನಿ. ತಂಗಾಳಿಯ ಆಹ್ಲಾದಕಾರಿ ಅನುಭವ ನಿಮ್ಮದಾಗಲಿ.

ತಪ್ಪು ನಡೆದಲ್ಲಿ ಕೊರಗುತ್ತಾ ಕೂರಬೇಡಿ : ಕಚೇರಿಯಲ್ಲಿ ಅಥವಾ ನಿಮ್ಮ ಬೇರೆ ಯಾವುದೇ ಕೆಲಸ ಕಾರ್ಯದಲ್ಲಿ ಎಲ್ಲಿ ನಿಮ್ಮಿಂದ ಯಾವುದಾದರೂ ತಪ್ಪು ನಡೆಯಬಹುದೋ ಎಂಬ ಭಯ ಸದಾ ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ಮನಸ್ಸು ಮುದುಡಿ ಹೋಗಬಹುದು. ಯಾವುದೇ ಕೆಲಸದಲ್ಲೂ ತಲ್ಲೀನರಾಗಲು ನಿಮ್ಮಿಂದ ಅಸಾಧ್ಯವಾಗುತ್ತದೆ. ವೈಫಲ್ಯ ಅಥವಾ ತಪ್ಪುಗಳು ಬದುಕಿನಲ್ಲಿ ಸಾಮಾನ್ಯ. ಎಲ್ಲರೂ ಜೀವನದ ಒಂದಲ್ಲಾ ಒಂದು ಘಟ್ಟದಲ್ಲಿ ಯಾವುದಾದರೂ ಕಾರ್ಯದಲ್ಲಿ ವಿಫಲರಾಗಿರುತ್ತಾರೆ ಹಾಗೂ ಹಲವಾರು ತಪ್ಪುಗಳನ್ನೂ ಮಾಡಿರುತ್ತಾರೆ. ಈ ವಾಸ್ತವ ಸದಾ ನಮ್ಮ ಮನಸ್ಸಿನಲ್ಲಿರಬೇಕು. ಹಾಗೆಂದ ಮಾತ್ರಕ್ಕೆ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದು ಮಾತ್ರ ಒಪ್ಪತಕ್ಕಂತಹ ವಿಚಾರವಲ್ಲ.

ಒತ್ತಡದಲ್ಲಿ ನಿರ್ಧಾರ ಕೈಗೊಳ್ಳಬೇಡಿ : ಮನಸ್ಸು ಒತ್ತಡದಲ್ಲಿದ್ದಾಗ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಗೋಜಿಗೆ ಹೋಗಬೇಡಿ. ನಿಮ್ಮ ತಕ್ಷಣದ ಪ್ರತಿಕ್ರಿಯೆಗಾಗಿ ಯಾರಾದರೂ ಕಾಯುತ್ತಿದ್ದರೆ ನಿಮಗೆ ಆ ಕೂಡಲೇ ನಿರ್ಧಾರ ಕೈಗೊಳ್ಳುವುದು ಕಷ್ಟವಾಗಬಹುದು. ಸಮಾಧಾನಚಿತ್ತದಿಂದ ಕೈಗೊಂಡ ನಿರ್ಧಾರವೇ ಅತ್ಯುತ್ತಮವಾಗಿರುತ್ತದೆ.

ನಿಮಗೇ ಸವಾಲು ಹಾಕಿ : ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವುದು ತ್ರಾಸದಾಯಕವಾದರೂ ನಮ್ಮ ಮೆದುಳಿಗೆ ಆ ಸಾಮಥ್ರ್ಯ ಇದೆ. ಮೆದುಳಿಗೂ ವ್ಯಾಯಾಮ ಅಗತ್ಯ. ಚೆನ್ನಾಗಿ ಓದುವ ಅಭ್ಯಾಸ ರೂಢಿಸಿಕೊಳ್ಳಿ. ಸಾಕಷ್ಟು ಸವಾಲೊಡ್ಡುವ ಕಾರ್ಯಗಳನ್ನು ನಿರ್ವಹಿಸಿ. ನಿಮಗೆ ನೀವೇ ಸವಾಲು ಹಾಕಿಕೊಂಡು ಈ ಕೆಲಸವನ್ನು ನೀವು ನಿರ್ವಹಿಸಬೇಕು.