ಆ ಹುಡುಗಿಯ ಸ್ಮೈಲೇ ನನ್ನ ಕೊಲ್ಲುತ್ತಿದೆ

 

ಪ್ರ : ನಾನೊಂದು ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತೀ ದಿನ ಬೆಳಿಗ್ಗೆ ಬಸ್ ಹಿಡಿದು ಆಫೀಸಿಗೆ ಹೋಗುವುದು ಅಂದರೆ ಪ್ರಯಾಸದ ಕೆಲಸವಾಗಿತ್ತು. ಯಾಕಪ್ಪಾ ಬೆಳಗಾಗುತ್ತದೆ ಅಂತ ಶಪಿಸುತ್ತಲೇ ಏಳುತ್ತಿದ್ದೆ. ಆದರೆ ಈಗ ಕೆಲವು ದಿನಗಳಿಂದ ನಾನು ಬೆಳಗಾಗುವುದನ್ನೇ ಕಾಯುತ್ತಿದ್ದೇನೆ. ರಾತ್ರಿ ಇಡೀ ಕನಸಿನಲ್ಲಿ ಕಾಡಿದ ಆ ಹುಡುಗಿಯ ಸ್ಮೈಲ್ ನೋಡಲು ಬಸ್ ಬರುವುದಕ್ಕೆ ಹದಿನೈದು ನಿಮಷ ಮೊದಲೇ ಹೋಗಿ ನಿಲ್ಲುತ್ತೇನೆ. ಆ ಹುಡುಗಿ ಈಗ ಸ್ವಲ್ಪ ದಿನಗಳಿಂದ ನನ್ನ ಬಸ್ಸಿನಲ್ಲಿ ಇರುತ್ತಾಳೆ. ಗೆಳತಿಯರೊಂದಿಗೆ ಹರಟೆ ಹೊಡೆಯುತ್ತಾ ನಗುತ್ತಾ ಬೆಳದಿಂಗಳು ಚೆಲ್ಲುವ ಆ ಹುಡುಗಿಯನ್ನು ನೋಡುವುದೇ ಕಣ್ಣಿಗೆ ಹಬ್ಬವೆನಿಸುತ್ತಿದೆ. ದಿನಾ ಒಬ್ಬರನ್ನೊಬ್ಬರು ನೋಡುವುದರಿಂದ ಈಗ ನನ್ನ ನೋಡಿದ ಕೂಡಲೇ ಚಿಕ್ಕ ಸ್ಮೈಲ್ ಕೊಡುತ್ತಾಳೆ. ಅವಳ ಆ ಮುಗುಳ್ನಗು ನನ್ನ ಇಡೀ ದಿನದ ಕೆಲಸಕ್ಕೆ ಸ್ಪೂರ್ತಿಯಾಗುತ್ತಿದೆ. ಅವಳು ನನಗಿಂತ ಮೊದಲಿನ ಸ್ಟಾಪಿನಲ್ಲಿ ಇಳಿದು ಹೋಗುವಾಗ ನನ್ನ ಕಡೆ ಒಮ್ಮೆ ದೃಷ್ಟಿ ಹಾಯಿಸುತ್ತಾಳೆ.  ಕಣ್ಣಿನಲ್ಲೇ ಬೈ ಹೇಳುತ್ತಿದ್ದಾಳೇನೋ ಅನ್ನುವ ಭಾವನೆ ನನ್ನದು. ಭಾನುವಾರ ರಜೆ ಇರುವುದರಿಂದ ಅವಳನ್ನು ನೋಡದೇ ಆ ದಿನ ಚಡಪಡಿಸುವಂತಾಗುತ್ತದೆ. ನಾನು ಅವಳ ಪ್ರೇಮಪಾಶದಲ್ಲಿ ಬಿದ್ದಿದ್ದೇನೆ ಅನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಅವಳಿಗೆ ನನ್ನ ಬಗ್ಗೆ ಯಾವ ಭಾವನೆ ಇದೆಯೋ ಗೊತ್ತಿಲ್ಲ. ಅವಳು ಯಾವ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಳೆ ಅನ್ನುವ ಅರಿವೂ ಇಲ್ಲ. ಅವಳು ನನ್ನ ಜೀವನಸಂಗಾತಿಯಾದರೆ ಇಡೀ ಜೀವನ ಅವಳ ನಗುವಿನಲ್ಲೇ ಮೈಮರೆಯುವ ಆಸೆ ನನ್ನದು. ಹೇಗೆ ಮುಂದುವರಿಯಲಿ?

: ಹುಡುಗಿಯ ಬರೀ ನಗು ನೋಡಿ ಇಷ್ಟೊಂದು ಇಮೋಶನಲ್ಲಾಗುವುದು ಸರಿಯಲ್ಲ. ಅವಳ ಪೂರ್ವಾಪರ ಒಂದೂ ಗೊತ್ತಿಲ್ಲ. ಅವಳ ಜೀವನದಲ್ಲಿ ಬೇರೆ ಯಾರಾದರೂ ಇದ್ದಾರೋ ಅದೂ ಮಾಹಿತಿಯಿಲ್ಲ. ನಿಮಗೆ ಅವಳ ಮೇಲೆ ಆ ರೀತಿ ಕ್ರಶ್ ಇದ್ದರೆ ಮೊದಲು ಅವಳನ್ನು ಮಾತಾಡಿಸಲು ಪ್ರಯತ್ನಿಸಿ. ಹಾಯ್, ಬಾಯ್‍ನಿಂದ ನಿಮ್ಮ ಸ್ನೇಹ ಶುರುವಾಗಲಿ. ನಿಧಾನಕ್ಕೆ ಅವಳು ಎಲ್ಲಿ ಕೆಲಸ ಮಾಡುತ್ತಾಳೆ, ಅವಳ ಕುಟುಂಬದ ಬಗ್ಗೆ ಒಂದೊಂದೇ ವಿಷಯ ಕಲೆ ಹಾಕಿ. ಆದರೆ ಹುಶಾರು! ಅತ್ಯುತ್ಸಾಹ ತೋರಿದರೆ ಅವಳು ನಿಮ್ಮ ಯಾವ ಮಾತಿಗೂ ಉತ್ತರಿಸದೇ ದೂರಹೋಗಬಹುದು. ನಿಮ್ಮ ಮಾತಿನಲ್ಲಿ, ನೋಟದಲ್ಲಿ ಜಂಟಲ್‍ಮ್ಯಾನಿನ ಲುಕ್ ಇರಲಿ. ಅಪಾಪೋಲಿಯಂತೆ ಅವಳನ್ನು ಕೆಕ್ಕರಿಸಿ ನೋಡುತ್ತಿದ್ದರೆ ನಿಮ್ಮ ಬಗ್ಗೆ ಅಸಹ್ಯಭಾವನೆ ಮೂಡಬಹುದು. ಅಥವಾ ಮೈಮೇಲೆ ಬಿದ್ದು ಮಾತಾಡಿಸಲು ಹೋದರೂ ಅವಳಿಗೆ ನಿಮ್ಮ ಬಗ್ಗೆ ಗೌರವ ಭಾವನೆ ಮೂಡಲಿಕ್ಕಿಲ್ಲ. ಸಮಯಾಸಂದರ್ಭ ನೋಡಿ ಅವಳನ್ನು ಮಾತಾಡಿಸಿ. ನಿಮ್ಮ ನಡತೆಯಲ್ಲಿ ಸಂಯಮ ಕಾಯ್ದುಕೊಳ್ಳಿ.ಅವಳಿಗೂ ನಿಮ್ಮ ಮೇಲೆ ವಿಶ್ವಾಸ ಮೂಡದಿದ್ದರೆ ನಿಮ್ಮೆಲ್ಲ ಪ್ರಯತ್ನ ವ್ಯರ್ಥವೇ. ನಿಮಗೆ ಅವಳ ಮೇಲೆ ಪ್ರೀತಿ ಮೂಡಿದೆ ಅನ್ನುವ ಹಿಂಟ್ ಅವಳಿಗೆ ಮೊದಲೇ ಕೊಡಬೇಡಿ. ನಿಮಗೆ ಎಲ್ಲ ವಿಷಯದಲ್ಲೂ ಅವಳು ಒಳ್ಳೆಯ ಲೈಫ್‍ಪಾರ್mನರ್ ಆಗುತ್ತಾಳೆ ಅನ್ನುವ ವಿಶ್ವಾಸ ಮೂಡಿದರೆ ಮಾತ್ರ ಮುಂದುವರಿದು ಪ್ರಪೋಸ್ ಮಾಡಿ. ಈಗಲೇ ತುಂಬಾ ಕನಸು ಕಾಣಲು ಹೋಗಬೇಡಿ. ಮುಂದೆ ನಿರಾಶೆಯಾದೀತು.