ಟೆಂಪೊ ವಿದ್ಯುತ್ ಕಂಬಕ್ಕೆ ಡಿಕ್ಕಿ, ಹಲವರು ಪವಾದಸದೃಶ ಪಾರು

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿ ಬಳಿಯ ಉಪ್ಪಳಿಗೆ ಎಂಬಲ್ಲಿ ಟೆಂಪೊವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಯಿತು.

ಈ ಸಂದರ್ಭ ಟೆಂಪೋದಲ್ಲಿದ್ದ ರಝಾಕ್, ಫೈಝಲ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಜನಾರ್ದನ ಹಾಗೂ ಮತ್ತೋರ್ವ ವ್ಯಕ್ತಿ ಹೊರಜಿಗಿದು ಪವಾಡಸದೃಶ್ಯವಾಗಿ ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ ಮುಂಜಾನೆ 5ರ ಸುಮಾರಿಗೆ ಈ ಘಟನೆ ನಡೆದಿದೆ. ರಝಾಕ್ ಹಾಗೂ ಫೈಝಲ್ ಅವರು ಹಸಿಮೀನು ತರಲೆಂದು ನೆಲ್ಯಾಡಿಯಿಂದ ಮಂಗಳೂರಿಗೆ ಟೆಂಪೋದಲ್ಲಿ ಹೊರಟಿದ್ದರು. ನೆಲ್ಯಾಡಿಯಲ್ಲಿ ಕರ್ತವ್ಯದಲ್ಲಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಇನ್ನೋರ್ವ ವ್ಯಕ್ತಿ ಉಪ್ಪಿನಂಗಡಿಗೆ ಆಗಮಿಸಲೆಂದು ಇದಕ್ಕೆ ಹತ್ತಿದ್ದರು. ಟೆಂಪೋ ಸಣ್ಣಂಪಾಡಿ ಬಳಿಯ ಉಪ್ಪಳಿಗೆ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿರುದ್ಧ ದಿಕ್ಕಿಗೆ ಚಲಿಸಿದ್ದು, ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಈ ಸಂದರ್ಭ ವಿದ್ಯುತ್ ಕಂಬ ತುಂಡಾಗಿದ್ದು, ಟೆಂಪೋದ ಚಕ್ರಕ್ಕೆ ಬೆಂಕಿ ಹತ್ತಿಕೊಂಡಿದೆ. ಕ್ಷಣ ಮಾತ್ರದಲ್ಲೇ ಬೆಂಕಿಯಿಡೀ ವ್ಯಾಪಿಸಿದೆ.

ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಹಾಗೂ ಪುತ್ತೂರು ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಟೆಂಪೋ ಸಂಪೂರ್ಣ ಸುಟ್ಟು ಹೋಗಿತ್ತು.