ಕಾರು ಡಿಕ್ಕಿಯಾಗಿ ಟೆಂಪೋ ಚಾಲಕ ಗಂಭೀರ ಗಾಯ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಏಕಮುಖ ಸಂಚಾರವಿರುವ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಮಸೀದಿ ಬಳಿ ಕಾರೊಂದರ ಚಾಲಕನ ನಿರ್ಲಕ್ಷ್ಯದಿಂದಾಗಿ ವಿರುದ್ಧ ದಿಕ್ಕಿನಿಂದ ಮುನ್ನುಗ್ಗಿ ಬಂದು ತಿಂಡಿ ಸಾಗಾಟದ ಟೆಂಪೋಗೆ ಡಿಕ್ಕಿಯಾದ ಪರಿಣಾಮ ಟೆಂಪೋ ಚಾಲಕ ಗಂಭೀರ ಗಾಯಗೊಂಡರೆ ಕ್ಲಿನರ್ ಕೂಡಾ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ನಡೆದಿದೆ.

ಗಾಯಗೊಂಡವರು ಮಂಗಳೂರು ನಿವಾಸಿಗಳಾದ ಮೊಹಮ್ಮದ್ ನೌಪಾಲ್ (28) ಹಾಗೂ ಮೊಹಮ್ಮದ್ ಶಮೀರ್(27). ಇವರು ವಿವಿಧ ಬಗೆಯ ತಿಂಡಿಗಳನ್ನು ಮಿನಿ ಟೆಂಪೋದಲ್ಲಿ ಹೇರಿಕೊಂಡು ಮಂಗಳೂರು ಕಡೆಗೆ ಹೋಗುತ್ತಿದ್ದಾಗ, ವಿರುದ್ಧ ದಿಕ್ಕಿನಿಂದ ರಾಂಗ್ ಸೈಡಿನಿಂದ ಬಂದ ಎರ್ಮಾಳು ಉದಯ ಕೆ ಶೆಟ್ಟಿ ಮಾಲಕತ್ವದ ಕಾರು ನೇರವಾಗಿ ಟೆಂಪೋಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಟೆಂಪೋದ ಹಿಂಭಾಗ ಹಾರಿ ಹೋಗಿದ್ದು, ತಿಂಡಿ-ತಿನಸುಗಳು ರಸ್ತೆ ಎಲ್ಲೆಡೆ ಚಲ್ಲಾಪಿಲ್ಲಿಯಾಗಿ ಬಿದ್ದಿದೆ.

ತಲೆಗೆ ಗಂಭೀರ ಗಾಯಗೊಂಡ ಟೆಂಪೋ ಚಾಲಕನನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಕಾರಿನ ಗಾಳಿ ಬೆಲೂನ್ ತೆರೆದುಕೊಂಡಿದ್ದರಿಂದ ಕಾರಿನಲ್ಲಿದ್ದ ಮಾಲಕರು ಸಹಿತ ಚಾಲಕನಿಗೂ ಯಾವುದೇ ಗಾಯವಾಗಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯೆ ಕಾರಣ ಎನ್ನಲಾಗಿದೆ.