ಮಾವುತನನ್ನು ಸೊಂಡಿಲಿನಿಂದ ನೆಲಕ್ಕಪ್ಪಳಿಸಿದ ದೇವಳದ ಆನೆ

ತಿರುಪತಿ : ಇಲ್ಲಿನ ಶ್ರೀ ಭುವರಾಹ ಸ್ವಾಮಿ ದೇವಳದ ಸಮೀಪ ರವಿವಾರ ಸಂಜೆ ಉದ್ರಿಕ್ತ ಆನೆಯೊಂದು ಒಮ್ಮಿಂದೊಮ್ಮೆ ತನ್ನ ಮಾವುತನನ್ನು ಸೊಂಡಿಲಿನಿಂದ ಹಿಡಿದು ನೆಲಕ್ಕಪ್ಪಳಿಸಿ ಆತನ ಕಾಲನ್ನು ಒದೆದು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ. ಬಲ ಗಾಲಿಗೆ ಗಂಭೀರ ಗಾಯಗಳುಂಟಾಗಿ ಮೂಳೆ ಮುರಿತಕ್ಕೊಳಗಾಗಿ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ ಮಾವುತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಆತನ ಕಾಲಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ದೇವಳದಲ್ಲಿ ಸಹಸ್ರ ದೀಪಾಲಂಕಾರ ಸೇವೆ ನಡೆಯಲಿರುವುದರಿಂದ ಮಾವುತ ಜಿ ಗಂಗಯ್ಯ (39) ಎರಡು ಆನೆಗಳಾದ ಲಕ್ಷ್ಮಿ ಮತ್ತು ಅವನಿಜಾರನ್ನು ಅವರ ವಾಸಸ್ಥಳದಿಂದ ದೇವಳಕ್ಕೆ ಕರೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ.
ದೇವಳದ ಸಮೀಪದ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ ವೇಗವಾಗಿ ನಡೆಯುವಂತೆ ಮಾಡಲು ಮಾವುತ ಲಕ್ಷ್ಮಿಗೆ ಹೊಡೆದಾಗ ಆನೆ ಕೋಪಗೊಂಡಿತ್ತೆನ್ನಲಾಗಿದೆ. ನಂತರ ಇನ್ನೊಂದು ಆನೆಯ ಮಾವುತ ಲಕ್ಷ್ಮಿಯನ್ನು ಸಮಾಧಾನಪಡಿಸಿ ಎರಡೂ ಸಲಗಗಳನ್ನು ಅವುಗಳ ವಾಸಸ್ಥಳಕ್ಕೆ ಕರೆದುಕೊಂಡು ಹೋಗಲು ಯಶಸ್ವಿಯಾಗಿದ್ದಾನೆ.