ಕರಾವಳಿ 3 ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ

ವಿಶೇಷ ವರದಿ 

ಮಂಗಳೂರು : ಕಳೆದ ನಾಲ್ಕೈದು ದಿನಗಳಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಿದ್ದು, ಜನತೆ `ಉಸ್ಸಪ್ಪ’ ಎನ್ನುವಂತಾಗಿದೆ.

ದ ಕ ಜಿಲ್ಲೆಯ ಪುತ್ತೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮುಂದುವರಿದಿದೆ. ಉಡುಪಿಯ ಕೆಲವು ಭಾಗದಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ.

ಈ ಹೊತ್ತಿಗೆ ಚಳಿ ಇರುವ ಈ ಪ್ರದೇಶಗಳಲ್ಲಿ ಸೆಖೆ ಹೆಚ್ಚಾಗಿದೆ. ಇದು ಪ್ರತೀಕೂಲ ಹವಾಮಾನದ ಲಕ್ಷಣ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಪತ್ತು ನಿಗಾವಣೆ ಕೇಂದ್ರದ ವಿಜ್ಞಾನಿ ಗಾವಸ್ಕರ್ ಹೇಳಿದರು.

ಸಾಮಾನ್ಯವಾಗಿ ಜನವರಿಯಲ್ಲಿ ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಪ್ರಮಾಣಕ್ಕಿಂತ ಜಾಸ್ತಿ ಇರುವುದಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ಕನಿಷ್ಠ ತಾಪಮಾನ 12ರಿಂದ 16 ಡಿಗ್ರಿ ದಾಖಲಾಗಿತ್ತು.

ಸೋಮವಾರ ಮಧ್ಯಾಹ್ನ 2.15ರ ಸುಮಾರಿಗೆ ಪುತ್ತೂರಿನಲ್ಲಿ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಮೂರೂ ಜಿಲ್ಲೆಯಲ್ಲಿ ಜನವರಿ 12ರಿಂದ 22ರವರೆಗೆ ತಾಪಮಾನದಲ್ಲಿ ಬಹುತೇಕ ಸ್ವಲ್ಪ ಬದಲಾವಣೆಯಾಗಿತ್ತು ಎಂದರು.

2016 ಜನವರಿ 31ರಂದು 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅದು ಆಗಿನ ಗರಿಷ್ಠ ತಾಪಮಾನವಾಗಿತ್ತು. ಈಗ ಏಕಾಏಕಿಯಾಗಿ ತಾಪಮಾನ ಅಧಿಕಗೊಂಡಿದ್ದು, ಜನರಿಗೆ ಬೇಸಗೆಯ ಅನುಭವವಾಗಿದೆ.

ರಾಜ್ಯ ಉಳಿದ ಕಡೆಗಳಲ್ಲಿ, ಮುಖ್ಯವಾಗಿ ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ತಾಪಮಾನ ಸಾಮಾನ್ಯವಾಗಿದೆ. ಮಲೆನಾಡಿನಲ್ಲಿ ಕಳೆದ ವಾರ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.