ಮೇಲ್ವರ್ಗದ ಯುವತಿಯ ಪ್ರೀತಿಸಿದ ದಲಿತ ಯುವಕನ ಮರ್ಯಾದಾ ಹತ್ಯೆ

ಹೈದರಾಬಾದ್ : ತೆಲಂಗಾಣದ ಪೆದ್ದಪಳ್ಳಿ ಜಿಲ್ಲೆಯ ಗ್ರಾಮವೊಂದರಲ್ಲಿ ಮೇಲ್ವರ್ಗದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ದಲಿತ ಯುವಕನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಯುವಕನ ಸಾವಿನ ಹಿನ್ನೆಲೆಯಲ್ಲಿ ಈಗ ಭಾರೀ ವಿವಾದವೊಂದು ಸೃಷ್ಟಿಯಾಗಿದೆ. ಮೃತ ದಲಿತ ಯುವಕ ಮಂತಾನಿ ಮಧುಕರ (28) ಆಗಿದ್ದು, ಇದೊಂದು `ಮರ್ಯಾದಾ ಕೊಲೆ’ಯಾಗಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

ಖಾನಾಪುರ ಗ್ರಾಮದಲ್ಲಿ ಮಾರ್ಚ 14ರಂದು ಈ ಘಟನೆ ನಡೆದಿತ್ತು. ಮಾರ್ಚ್ 13ರಂದು ಎರಡೂ ಕುಟುಂಬಗಳು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ನೊಂದ ಯುವತಿ ತನ್ನ ಮನೆಯಲ್ಲಿ ಕೀಟನಾಶಕ ಸೇವಿಸಿದ್ದರೆ, ಮಧುಕರನು ಗ್ರಾಮದ ಹೊರಗಿರುವ ಕಾಲುವೆಯ ಬಳಿ ವಿಷ ಪ್ರಾಶನ ಮಾಡಿಕೊಂಡಿದ್ದ. ಆದಾಗ್ಯೂ ಯುವತಿ ಸಾವಿಂದ ಪಾರಾಗಿದ್ದು, ಆಸ್ಪತ್ರೆ ಸೇರಿದ್ದಳು. ತಕ್ಷಣಕ್ಕೆ ಯುವಕನ ಪತ್ತೆಯಾಗಿಲ್ಲ. ಮಧುಕರನು ಸದ್ರಿ ಗ್ರಾಮದ ಪುಟ್ಟಶಂಕರ್ ಎಂಬವರ ಟ್ರ್ಯಾಕ್ಟರ್ ಚಾಲಕನಾಗಿದ್ದ. ಆತ ಶಂಕರನ ಸೊಸೆಯನ್ನು ಪ್ರೀತಿಸಲಾರಂಭಿಸಿದ್ದ ಎಂದು ಮಧುಕರನ ಸಹೋದರ ಸಮಯ್ಯ ಹೇಳಿದ್ದಾರೆ. “ಅವರಿಬ್ಬರೂ ವಿವಾಹವಾಗಲಿಚ್ಚಿಸಿದ್ದರೂ, ಇದಕ್ಕೆ ಸಮ್ಮತಿ ವ್ಯಕ್ತಪಡಿಸದೆ ಮಧುಕರನಿಗೆ ಎಚ್ಚರಿಕೆ ನೀಡಿದ್ದರು” ಎಂದವರು ತಿಳಿಸಿದ್ದಾರೆ.

ಮೊದಲಿಗೆ ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿರಲಿಲ್ಲ. ಆದರೆ ಮಧುಕರ್ ತನ್ನ ಸಂಬಂಧಿಗಳಿಂದ ಕೊಲೆಗೀಡಾಗಲಿದ್ದಾನೆಂಬ ವಿಷಯ ತಿಳಿಕೊಂಡ ಬಳಿಕ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು.