ಪ್ರಿಯತಮನ ಜತೆ ರೈಲು ನಿಲ್ದಾಣಕ್ಕೆ ಬಂದ ಬಾಲಕಿಯನ್ನು ನಾಗರಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದರು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸಮವಸ್ತ್ರ ಧರಿಸಿದ 17ರ ಹರೆಯದ ವಿದ್ಯಾರ್ಥಿನಿಯೊಬ್ಬಳು ಸಂಶಯಾಸ್ಪದ ರೀತಿಯಲ್ಲಿ ರೈಲು ನಿಲ್ದಾಣದಲ್ಲಿ ಕಂಡುಬಂದಿದ್ದು ಆಕೆಯನ್ನು ನಾಗರಿಕರು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ.

ಬಾಲಕಿಯನ್ನು ಪೊಲೀಸರು ತನಿಖೆಗೊಳಪಡಿಸಿದಾಗ ಪ್ರಿಯತಮನೊಂದಿಗೆ ಪರಾರಿಯಾಗಲು ಬಂದಿರುವುದಾಗಿ ತಿಳಿದುಬಂದಿದೆ. ಬಳಿಕ ಆಕೆಯ ಪೋಷಕರನ್ನು ಕರೆಸಿ ಅವರ ಜತೆ ಕಳುಹಿಸಿಕೊಡಲಾಯಿತು. ಇದೇ ವೇಳೆ ಪ್ರಿಯತಮನೆಂದು ಹೇಳಲಾಗುವ ಯುವಕನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಯಿತು.

ಶಾಲಾ ಸಮವಸ್ತ್ರ ಧರಿಸಿ ಸಂಶಯಾಸ್ಪದವಾಗಿ ಕುಂಬಳೆ ರೈಲ್ವೇ ನಿಲ್ದಾಣ ಪರಿಸರದಲ್ಲಿ ಬಾಲಕಿ ಕಂಡುಬಂದಿದ್ದು, ಆಕೆ ಬಗ್ಗೆ ನಾಗರಿಕರು ಸಂಶಯಗೊಂಡು ವಿಚಾರಿಸಿದಾಗ ಉತ್ತರಿಸಲು ತಡಬಡಾಯಿಸಿದಾಗ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಮಹಿಳಾ ಪೊಲೀಸರು ಬಂದು ಬಾಲಕಿಯನ್ನು ವಿಚಾರಣೆಗೊಳಪಡಿಸಿದಾಗ ಆರಿಕ್ಕಾಡಿ ನಿವಾಸಿಯಾದ ಪ್ರಿಯತಮನೊಂದಿಗೆ ಪರಾರಿಯಾಗಲು ಬಂದಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಹೆತ್ತವರು ಹಾಗೂ ಪ್ರಿಯತಮನನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿ ಪ್ರಿಯತಮನಿಗೆ ಎಚ್ಚರಿಕೆ ನೀಡಿ ಬಾಲಕಿಯನ್ನು ಹೆತ್ತವರೊಂದಿಗೆ ಕಳುಹಿಸಲಾಯಿತು.