9ರ ಬಾಲಕನ ಕೊಲೆಗೈದು ಮಾಂಸ ಭಕ್ಷಿಸಿ, ರಕ್ತ ಹೀರಿದ 16ರ ಹುಡುಗ

ಲುಧಿಯಾನ : ಹದಿನಾರು ವರ್ಷದ ಹುಡುಗನೊಬ್ಬ ಒಂಬತ್ತು ವರ್ಷದ ಬಾಲಕನನ್ನು ಕೊಲೆಗೈದು  ಆತನ ರಕ್ತ ಹೀರಿ, ಮಾಂಸ  ಭಕ್ಷಿಸಿದ ಭೀಭತ್ಸ ಘಟನೆ ನಡೆದಿದ್ದು ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ವಿಕೇಶ್ ಕುಮಾರ್ ತಾನು ದೀಪು ಎಂಬ ಬಾಲಕನ ಕೊಲೆಗೈದಿರುವ  ಬಗ್ಗೆ  ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಜನವರಿ 17ರಂದು ದೀಪುವಿಗೆ ಗಾಳಿಪಟದ ಆಸೆ ತೋರಿಸಿ ತನ್ನ ಮನೆಗೆ ಕರೆದೊಯ್ದಿದ್ದ.  ಆರಂಭದಲ್ಲಿ ಆತ ಬಾಲಕನನ್ನು  ತನ್ನ ಬಳಿಯಿರಿಸಿ ಹಣದ ಬೇಡಿಕೆಯಿಡಲು ನಿರ್ಧರಿಸಿದ್ದು ಅದು ಸಾಧ್ಯವಾಗದೆ ಕತ್ತು ಅಮುಕಿ ಕೊಲೆಗೈದು ತೊಡೆಯ ಭಾಗದ ಚರ್ಮವನ್ನು ತಿಂದು ರಕ್ತ ಹೀರಿದ್ದ ನಂತರ ದೇಹವನ್ನು ಚೂರುಚೂರಾಗಿಸಿ ಆ ಚೂರುಗಳನ್ನು ತೊಳೆದು ಗೋಣಿಚೀಲವೊಂದರಲ್ಲಿ ತುಂಬಿ ಬಾಲಕನ ಮನೆಯಿಂದ ಕೇವಲ 50 ಮೀಟರ್ ದೂರದ ಖಾಲಿ ಜಾಗವೊಂದರಲ್ಲಿ ಇರಿಸಿದ್ದ. ನಂತರ ಬಾಲಕನ ಹೃದಯದ ಭಾಗವನ್ನು ಲುಧಿಯಾನದ ಶಾಲೆಯ ಅಂಗಳವೊಂದಕ್ಕೆ ಎಸೆದಿದ್ದನು.

ಶಾಲೆಗೆ ಹೋಗಲು ಹಾಗೂ ಕಲಿಯಲು ಆಸಕ್ತಿಯಿಲ್ಲದೇ ಇದ್ದ ವಿಕೇಶ್ ಈ ರೀತಿಯಾಗಿ ಶಾಲೆಗೆ ಅಪಖ್ಯಾತಿ ಬಂದು ಅದು ಮುಚ್ಚಿಹೋಗುವಂತೆ ಮಾಡಲು ಯೋಚಿಸಿದ್ದ. ಆತ ಎಸೆದಿದ್ದ ಬಾಲಕನ ಹೃದಯ ವನ್ನು ಪೊಲೀಸರು ಶಾಲೆಯಿಂದ ವಶಪಡಿಸಿಕೊಂಡಿದ್ದಾರೆ.

ಆರೋಪಿಗೆ ಮಾನಸಿಕ ಸಮಸ್ಯೆಯಿದ್ದು ಆತ ಹಸಿ ಮಾಂಸವನ್ನು ತಿನ್ನುವ ಅಭ್ಯಾಸ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ