ಮೊಬೈಲ್ ಟವರಿಂದ ಹಾರಿ ಯುವಕ ಸಾವು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ರೋಗಪೀಡಿತಳಾದ ತಾಯಿಯ ಸ್ಥಿತಿ ಕಂಡು ಮನನೊಂದ ಪುತ್ರ ಮೊಬೈಲ್ ಟವರಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ.

ಬದಿಯಡ್ಕ ಬಳಿಯ ವಿದ್ಯಾಗಿರಿ ಬಾಪುಂಗಯ ಪರಿಶಿಷ್ಟ ಜಾತಿ ಕಾಲೊನಿಯ ಸೀತಾರಾಮ ಎಂಬವರ ಪುತ್ರ ಮನೋಜ್ (17) ಬುಧವಾರ ರಾತ್ರಿ ಮೊಬೈಲ್ ಟವರಿಂದ ಜಿಗಿದು ಆತ್ಮಹತ್ಯೆಗೈದಿದ್ದಾನೆ. ಈತ ಕೂಲಿ ಕಾರ್ಮಿಕನಾಗಿದ್ದನು. ಈತನ ತಾಯಿ ಲೀಲಾ (45) ಕಳೆದ ಹದಿಮೂರು ವರ್ಷಗಳಿಂದ ರೋಗಪೀಡಿತರಾಗಿದ್ದು, ಬುಧವಾರ ರಾತ್ರಿ 10 ಗಂಟೆಗೆ ಲೀಲಾರಿಗೆ ಅಸೌಖ್ಯ ಉಲ್ಭಣಗೊಂಡಿತ್ತು. ಇದರಿಂದ ನೆಲದಲ್ಲಿ ಒದ್ದಾಡುತ್ತಿದ್ದ ಆಕೆಯನ್ನು ಕಂಡ ಪುತ್ರ ಮನೋಜ್ ನೊಂದು ಅಳುತ್ತಾ ಮನೆಯಿಂದ ಹೊರಗೊಡಿದನು. ವಿಷಯ ತಿಳಿದು ನೆರೆಮನೆ ನಿವಾಸಿಗಳು ಈ ವೇಳೆ ಮನೆಗೆ ತಲುಪಿದ್ದರು. ಮನೋಜ್ ಅಳುತ್ತಾ ಓಡುತ್ತಿರುವುದನ್ನು ಕಂಡ ಇವರು ಆತನ ಹಿಂದೆ ಓಡಿದರು. ಆದರೆ ಅಷ್ಟರೊಳಗೆ ಮನೋಜ್ ಮೊಬೈಲ್ ಟವರಿಗೆ ಹತ್ತಿ ಕೆಳಗೆ ಹಾರಿಯಾಗಿತ್ತು. ಮನೆಯಿಂದ ಸುಮಾರು 150 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ನೆಲಕ್ಕೆ ಬಿದ್ದ ರಭಸದಲ್ಲಿ ಮನೋಜ್ ತಲೆ ಬಿರುಕುಬಿಟ್ಟಿತ್ತು.

ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮಹಜರು ನಡೆಸಲಾಯಿತು. ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಲೀಲಾ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಒಳಗೊಂಡಿದ್ದಾರೆ.