ಐಟಿ ಯುವತಿಗೆ ಬೆಂಕಿ ಹಚ್ಚಿ ಕೊಲೆ

ಸಾಂದರ್ಭಿಕ ಚಿತ್ರ

ಚೆನ್ನೈ : ಇಲ್ಲಿನ ಅಡಮಬಾಕ್ಕಂನಲ್ಲಿ 21 ವರ್ಷದ ಐಟಿ ಇಂಜಿನಿಯರೊಬ್ಬಳಿಗೆ ಮಾಜಿ ತರಗತಿಮಿತ್ರ ಮೈಮೇಲೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಲೆಗೈದ ಘಟನೆಯೊಂದು ಸೋಮವಾರ ನಡೆದಿದೆ.

ಬೆಂಕಿಯಿಂದ ಸುಟ್ಟ ಇಂದುಜಾಳ ರಕ್ಷಣೆಗೆ ತಾಯಿ, ಸಹೋದರಿ ಹಾಗೂ ನೆರೆಮನೆಯವರು ಧಾವಿಸಿದ್ದು, ಅವರಿಗೂ ಸುಟ್ಟ ಗಾಯವಾಗಿದೆ. ಶಾಲಾ ದಿನಗಳಲ್ಲಿ ತರಗತಿ ಮಿತ್ರನಾಗಿದ್ದ ವೆಲಚೇರಿಯ ಆಕಾಶ್ (22) ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದರು.ಕೆಲವು ಸಮಯದಿಂದ ಆಕೆಯನ್ನು ಪ್ರೀತಿಸುತ್ತಿದ್ದ ಆಕಾಶ್,

ಇತ್ತೀಚೆಗೆ ಇಂದುಜಾಳೆದುರು ವಿವಾಹ ಪ್ರಸ್ತಾವ ಇಟ್ಟಿದ್ದ. ಇದಕ್ಕೆ ಆಕೆ ಪ್ರತಿಕ್ರಿಯಿಸಿರಲಿಲ್ಲ. ಬಳಿಕ ಆಕಾಶ್ ಆಕೆಗೆ ಬೆದರಿಕೆಯೊಡ್ಡುತ್ತಿದ್ದ. ಸೋಮವಾರ ಆಕೆಯ ಮನೆಗೆ ತೆರಳಿದ ಆಕಾಶ್, ಆಕೆಯ ಮೈಮೇಲೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಇಂದುಜಾಳನ್ನು ರಕ್ಷಿಸಲು ಮುಂದಾಗಿದ್ದ ತಾಯಿ ಮತ್ತು ಸಹೋದರಿಯ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದರು.