ಆಸ್ಟ್ರೇಲಿಯಾಕ್ಕೆ ಸಡ್ಡು ಹೊಡೆದ ಟೀಂ ಇಂಡಿಯಾ

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಟೆಸ್ಟ್ ಕ್ರಿಕೆಟಿನಲ್ಲಿ ಸತತವಾಗಿ `ಸರಣಿ ವಿಜಯ’ ದಾಖಲಿಸುವುದು ಕಷ್ಟಸಾಧ್ಯ. ಅದರಲ್ಲೂ ನಿರಂತರವಾಗಿ ಇಂತಹ ಸಾಧನೆಯನ್ನು ದಾಖಲಿಸುವುದು ಸಾಧ್ಯವಿಲ್ಲದ ಮಾತು. ಆದರೆ, ಟೀಂ ಇಂಡಿಯಾ ನಿರಂತರವಾಗಿ ಒಂಭತ್ತು ಟೆಸ್ಟ್ ಸರಣಿಗಳಲ್ಲಿ ವಿಜಯ ಗಳಿಸುವುದೆಂದರೆ ನಂಬಲಾಸಾಧ್ಯವಾದರೂ ನಿಜ. ಬುಧವಾರ ಶ್ರೀಲಂಕಾ ವಿರುದ್ಧ ಮುಕ್ತಾಯಗೊಂಡ ಮೂರು ಟೆಸ್ಟ್ ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಸರಣಿ ಜಯ ಪಡೆದಿದೆ.

ಹೌದು, ಈ ಸರಣಿ ವಿಜಯ ಟೀಂ ಇಂಡಿಯಾಕ್ಕೆ ಪ್ರಾಪ್ತಿಯಾದ ಒಂಭತ್ತನೇಯದ್ದು. ಇಂತಹ ಅಪರೂಪದ  ವಿಶ್ವದಾಖಲೆಗೆ ಈ ಹಿಂದೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಭಾಜನವಾಗಿತ್ತು ಎನ್ನುವುದನ್ನು ಉಲ್ಲೇಖಿಸಲೇ ಬೇಕು. 2005ರಿಂದ 2008ರ ಅವಧಿಯಲ್ಲಿ ರಿಕ್ಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸತತ ಒಂಭತ್ತು ಟೆಸ್ಟ್ ಸರಣಿಗಳಲ್ಲಿ ವಿಜಯೋತ್ಸವಗೈದು ವಿಶ್ವದಾಖಲೆ ನಿರ್ಮಿಸಿತ್ತು. ಇದೀಗ ಇಂತಹ ಮಹತ್ವದ ವಿಶ್ವದಾಖಲೆಯನ್ನು ಟೀಂ ಇಂಡಿಯಾ ಸರಿಗಟ್ಟಿದೆ.

ವಿರಾಟ್ ಕೊಹ್ಲಿ ಸಾರಥ್ಯ ವಹಿಸಿಕೊಂಡ ನಂತರ ಟೆಸ್ಟ್ ಸರಣಿಗಳಲ್ಲಿ ಟೀಂ ಇಂಡಿಯಾಕ್ಕೆ ಸತತ ಸರಣಿ ವಿಜಯಗಳು ಪ್ರಾಪ್ತಿಯಾಗುತ್ತಿವೆ. 2015ರಲ್ಲಿ ಮೊದಲ ಬಾರಿಗೆ ಮಹೇಂದ್ರ ಸಿಂಗ್ ಧೋನಿ ಅವರಿಂದ ಟೆಸ್ಟ್ ಕ್ಯಾಪ್ಟನ್ಸಿಯನ್ನು ಪಡೆದುಕೊಂಡ ವಿರಾಟ್ ಕೊಹ್ಲಿ ಇದುವರೆಗೆ ಸರಣಿ ಸೋಲಿನ ಸಮೀಪಕ್ಕೂ ಬಂದಿಲ್ಲ. ಟೆಸ್ಟ್ ಕ್ರಿಕೆಟಿನ ಅಗ್ರಮಾನ್ಯ ತಂಡಗಳ ವಿರುದ್ಧ ಕೊಹ್ಲಿ ಬ್ರಿಗೇಡ್ ಟೆಸ್ಟ್ ಸರಣಿ ಆಡಿದೆ. ಆದರೆ, ಒಂದೇ ಒಂದು ಸರಣಿ ಸೋಲು ಕಂಡಿಲ್ಲ.

2005ರಿಂದ 2008ರ ಅವಧಿಯಲ್ಲಿ ರಿಕ್ಕಿ ಪಾಂಟಿಂಗ್ 9 ಟೆಸ್ಟ್ ಸರಣಿಗಳಲ್ಲಿ 26 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 22 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದಾರೆ. ಸೋತಿರುವುದು ಒಂದು ಟೆಸ್ಟನ್ನು. 3 ಪಂದ್ಯಗಳು ಡ್ರಾ ಆಗಿತ್ತು.

ಹೀಗೆ, ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾದ ಟೆಸ್ಟ್ ಸರಣಿ ಗೆಲುವಿನ ತುಲನೆ ಮಾಡಿದಾಗ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾವೇ ಶ್ರೇಷ್ಠ ಎನಿಸುತ್ತದೆ. ಏಕೆಂದರೆ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯನ್ನು ಟೀಂ ಇಂಡಿಯಾ ಗೆದ್ದದೇ ಆದರೆ ಅದೊಂದು ವಿಶ್ವದಾಖಲೆ ಆಗಲಿದೆ. ಅಂತೂ ಸತತ ಟೆಸ್ಟ್ ಸರಣಿ ಗೆಲುವಿನ ನಾಗಲೋಟದಲ್ಲಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಈಗ ಚಾರಿತ್ರಿಕ ಟೆಸ್ಟ್ ಸರಣಿ ಗೆಲುವಿಗೆ ಕಾತರಿಸುತ್ತಿದೆ.

 

LEAVE A REPLY