ವೈದ್ಯರಿಗೆ ಹಲ್ಲೆಗೈದ ಸಂಸದನ ಪತ್ತೆಗೆ ಪೊಲೀಸ್ ತಂಡ ರಚನೆ

ಸೀಸಿಟೀವಿ ದೃಶ್ಯ ಫಾರೆನ್ಸಿಕ್ ಲ್ಯಾಬಿಗೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಶಿರಸಿಯ ಟಿ ಎಸ್ ಎಸ್ ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಂಸದ ಅನಂತ ಹೆಗಡೆ ಹಾಗೂ ಬಿಜೆಪಿ ಮುಖಂಡ ಕೃಷ್ಣ ಎಸಳೆ ಅವರ ಶೋಧ ಕಾರ್ಯಕ್ಕೆ ವಿಶೇಷ ಪೊಲೀಸ್ ತಂಡ ತೆರಳಿದೆ. ಇನ್ನೊಂದಡೆ ಹಲ್ಲೆ ಮಾಡಿದ ದಾಖಲೆ ಸೀಸಿಟೀವಿ ದೃಶ್ಯವನ್ನು ಬೆಂಗಳೂರು ಲ್ಯಾಬಿಗೆ ಕಳುಹಿಸಲಾಗಿದೆ.

ಜನವರಿ 2ರಂದು ಶಿರಸಿಯ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ತಮ್ಮ ತಾಯಿ ಚಿಕಿತ್ಸೆ ವಿಷಯದಲ್ಲಿ ಅಲಕ್ಷ ತೋರಿದ್ದಾರೆಂಬ ಅಸಮಾಧಾನದಿಂದ ಸಂಸದ ಅನಂತ ಹೆಗಡೆ ಹಾಗೂ ಸಹಚರರು ಆಸ್ಪತ್ರೆಯ ವೈದ್ಯರಾದ ಡಾ ಮಧುಕೇಶ್ವರ, ಡಾ ಬಾಲು ಭಟ್ಟ, ಸಿಬ್ಬಂದಿ ರಾಹುಲ ಮೇಲೆ ಹಲ್ಲೆ ನಡೆಸಿದ್ದರು. ತಕ್ಷಣ ಮಧ್ಯರಾತ್ರಿಯೇ ಆಸ್ಪತ್ರೆಯ ಪ್ರಮುಖ ಶಾಂತಾರಾಮ ಹೆಗಡೆ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಶಿರಸಿ ವೈದ್ಯರ ಸಭೆ ನಡೆದು ಪ್ರಕರಣ ದಾಖಲಿಸುವ ಚರ್ಚೆ ನಡೆಯಿತು. ಅಷ್ಟರಲ್ಲಿ ಸಂಸದರು ಆಗಮಿಸಿ ಘಟನೆ ಬಗ್ಗೆ ವಿಷಾದಿಸಿದ್ದರಿಂದ ಆ ವಿಷಯ ಅಲ್ಲೇ ಮುಗಿಸಲಾಯಿತು.

ಸೀಸಿಟೀವಿ

ಹಲ್ಲೆ ನಡೆಯುವಾಗ ಆವರಣದಲ್ಲಿದ್ದ ಸೀಸಿಟೀವಿಯಲ್ಲಿ ಎಲ್ಲ ಘಟನೆಗಳು ದಾಖಲಾಗಿದ್ದವು. ಅದು ಹೇಗೂ ಆಸ್ಪತ್ರೆ ಕಂಪೌಂಡನಿಂದ ಟೀವಿ ಚಾನೆಲುಗಳ ಕಚೇರಿಗೆ ಹೋದ್ದರಿಂದ ವಿಷಯ ದೊಡ್ಡದಾಯಿತು. ಒಂದಡೆ ವಿಷಯ ರಾಜಿಯಾಗಿ ವೈದ್ಯರು ಬೆಳಿಗ್ಗೆ ಮನೆಗೆ ಹೋದ ನಂತರ ಟೀವಿಗಳಲ್ಲಿ ಈ ದೃಶ್ಯಾವಳಿ ಬಂದು ರಾಜ್ಯ ಮಟ್ಟದ ಸುದ್ದಿಯಾಯಿತು. ಫುಟೇಜ್ ಇಲ್ಲದಿದ್ದರೆ ಈ ಘಟನೆ ಅಂದೇ ಮುಗಿದು ಹೋಗುತ್ತಿತ್ತು. ಫುಟೇಜಿನಿಂದ ರಾಷ್ಟ್ರ ಮಟ್ಟದವರೆಗೂ ಚರ್ಚೆಗೆ ಕಾರಣವಾಯಿತು.

ವೈದ್ಯರ ರಾಜ್ಯ ಸಂಘದ ಒತ್ತಡದಂತೆ ಗೃಹಮಂತ್ರಿ ಫುಟೇಜ್ ಆಧರಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಆದೇಶಿಸಿದರು. ಬಳಿಕ ಎಫ್ ಐ ಆರ್ ಸಹ ಆಯಿತು. ಇದೀಗ ಪೊಲೀಸರು ಸೀಸಿಟೀವಿ ದೃಶ್ಯವನ್ನು ಬೆಂಗಳೂರಿನ ಫಾರೆನ್ಸಿಕ್ ಲ್ಯಾಬಿಗೆ ಕಳುಹಿಸಿದ್ದಾರೆ.

ಇನ್ನೊಂದಡೆ ಡಿವೈಎಸ್ಪಿ ನಾಗೇಶ ಶೆಟ್ಟಿ ಅವರು ತನಿಖೆ ಆರಂಭಿಸಿದ್ದು, ಪೊಲೀಸ್ ತಂಡ ಸಹ ಸಂಸದ ಅನಂತ ಹೆಗಡೆ, ಕೃಷ್ಣ ಎಸಳೆ ಅವರ ಶೋಧ ಕಾರ್ಯಕ್ಕೆ ತೆರಳಿದ್ದಾರೆ.