ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡವನ್ನು ಬೆಂಬಲಿಸಲಿದೆ ಟೀಂ ಬರ್ಕೆಯ ನಾಸಿಕ್ ಬ್ಯಾಂಡ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೇಶಾದ್ಯಂತ ಐಪಿಎಲ್ ಹವಾ ಈಗಾಗಲೇ ಶುರುವಾಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಪುಳಕವೆಬ್ಬಿಸಿದೆ. ಎ 8ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಡೆಲ್ಲಿ ಡೇರ್‍ಡೆವಿಲ್ಸ್ ನಡುವಿನ ಪಂದ್ಯಕ್ಕೆ ಈ ಬಾರಿ ನಮ್ಮ ಕುಡ್ಲದ ಟೀಮ್ ಬರ್ಕೆ ತಂಡದ ಹುಡುಗರು ನಾಸಿಕ್ ಬ್ಯಾಂಡ್ ಬಾರಿಸುವ ಮೂಲಕ ಇನ್ನಷ್ಟು ಕಳೆ ಕಟ್ಟಿಸಲಿದ್ದಾರೆ.

ಶೇನ್ ವಾಟ್ಸನ್ ನಾಯಕತ್ವದ ಆರ್ಸಿಬಿ ತಂಡದ ಐಪಿಎಲ್ 2017ರ ತಂಡಕ್ಕೆ ಡ್ರಮ್ ವಾದನದ ಮೂಲಕ ಮಂಗಳೂರಿನ ಟೀಮ್ ಬರ್ಕೆ ತಂಡದ ಯುವಕರು ರೋಚಕತೆ ತುಂಬಲಿದ್ದಾರೆ.

ಇವರ ಪ್ರತಿಭೆಯನ್ನು ಕಂಡಿರುವ ಐಪಿಎಲ್ ಪಂದ್ಯದ ಇವೆಂಟ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಿ ಎನ್ ಎ ಕಂಪೆನಿ ಈ ನಾಸಿಕ್ ತಂಡವನ್ನು ಆರ್ಸಿಬಿ ಬೆಂಬಲಿಸಿ ಪ್ರದರ್ಶನ ನೀಡಲು ಆಹ್ವಾನಿಸಿದೆ.

ಯುವತಿಯರೂ ಸೇರಿದಂತೆ ಈ ತಂಡದಲ್ಲಿ ಸುಮಾರು 20 ಮಂದಿ ಡ್ರಮ್ ವಾದನದ ಪ್ರತಿಭಾನ್ವಿತರಿದ್ದು, ನಾಯಕತ್ವವನ್ನು ಪ್ರಜ್ವಲ್ ಮುನ್ನಡೆಸುತ್ತಿದ್ದಾರೆ. ಗೋಕರ್ಣನಾಥ ನಾಸಿಕ್ ಬ್ಯಾಂಡ್ (ಟೀಮ್ ಬರ್ಕೆ) ಕಳೆದ 12 ವರ್ಷಗಳಿಂದ ಮಂಗಳೂರು ದಸರಾದಲ್ಲಿ ನಾಸಿಕ್ ಬ್ಯಾಂಡ್ ಪ್ರದರ್ಶನ ನೀಡುತ್ತಿದೆ. ಈ ನಾಸಿಕ್ ತಂಡದ ಸದಸ್ಯೆಯಾಗಿರುವ ಧೃತಿ ಸಾಯಿ ಈಗ ಚಿತ್ರ ನಟಿಯಾಗಿ ಸ್ಯಾಂಡಲವುಡ್ಡಿನ ಕದ ತಟ್ಟಿದ್ದಾರೆ.

ನಾವು ಪ್ರೇಕ್ಷಕರಾಗಿ ಐಪಿಎಲ್ ಭಾಗವಾಗುವವರಿದ್ದೆವು. ಆದರೆ ಇದೀಗ ನಾವು ಮೈದಾನದ ಒಳಗೆ ಪ್ರದರ್ಶನ ನೀಡುವವರಾಗಿದ್ದೇವೆ. ಇದಕ್ಕಿಂತ ಖುಷಿ ಇನ್ನೇನಿದೆ ಅಂತಾರೆ ಟೀಮ್ ಲೀಡರ್ ಪ್ರಜ್ವಲ್.