ಸ್ಪೆಷಲ್ ಕ್ಲಾಸ್ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ

ಸಾಂದರ್ಭಿಕ ಚಿತ್ರ

ಬೆಂಗಳೂರು : ವಿದ್ಯಾರ್ಥಿನಿಯರಿಗೆ ಸ್ಪೆಷಲ್ ಕ್ಲಾಸ್ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ನಾಗವಾರ ಸಮೀಪದ ಖಾಸಗಿ ಶಾಲೆಯ ಹುಸೇನ್ ಎಂಬ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯ ನನನಕ 5ರಿಂದ 9ನೇ ತರಗತಿಯಲ್ಲಿ ಕಲಿಯುತ್ತಿರುವ ಒಟ್ಟು ಐದು ಮಂದಿ ವಿದ್ಯಾರ್ಥಿನಿಯರು ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ. ಶಿಕ್ಷಕ ಅವರಿಗೆಲ್ಲಾ ಆಗಸ್ಟ್ ತಿಂಗಳಿನಿಂದ ಕಿರುಕುಳ ನೀಡುತ್ತಿದ್ದ ಎಂದು ಅವರು ದೂರಿದ್ದಾರೆ. ಆರೋಪಿ ಶಿಕ್ಷಕ ಹುಸೇನ್ ವಿರುದ್ಧ ಪೋಸ್ಕೊ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ಹನ್ನೊಂದರಿಂದ ಹದಿನಾಲ್ಕು ವರ್ಷದ ಐದು ಮಂದಿ ಸಂತ್ರಸ್ತ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಲು ಪೊಲೀಸರು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ದೂರಿನ ಪ್ರಕಾರ ಕೆಲವೊಂದು ಪ್ರಮುಖ ಪಠ್ಯಗಳಿಗಾಗಿ ಹುಸೇನ್ ರವಿವಾರದಂದು ಬೆಳಿಗ್ಗೆ 10ರಿಂದ ಸಂಜೆ 5ರ ತನಕ ಸ್ಪೆಷÀಲ್ ಕ್ಲಾಸ್ ನಡೆಸುತ್ತಿದ್ದು ಈ ತರಗತಿಗಳಿಗೆ ಸುಮಾರು 30ರಿಂದ 35 ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು. ಈ ಸಂದರ್ಭವನ್ನು ದುರುಪಯೋಗಪಡಿಸಿ ಆತ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ. ಶಿಕ್ಷಕ ತನ್ನ ಮನೆಗೂ ವಿದ್ಯಾರ್ಥಿನಿಯರನ್ನು ಕರೆಸಿ ಅವರಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಶಿಕ್ಷಕನಿಂದ ಕಿರುಕುಳಕ್ಕೊಳಗಾದ ತನ್ನ ಇಬ್ಬರು ಪುತ್ರಿಯರನ್ನೂ ಬೇರೆ ಶಾಲೆಗೆ ಸೇರಿಸಿರುವುದಾಗಿ ಮಹಿಳೆಯೊಬ್ಬಳು ಹೇಳಿಕೊಂಡಿದ್ದಾಳೆ. ಶಿಕ್ಷಕನ ವಿರುದ್ಧ ದೂರು ನೀಡಿದವರಲ್ಲಿ ಈ ಮಹಿಳೆಯ ಪುತ್ರಿಯೂ ಸೇರಿದ್ದಾಳೆ.