ಶಿಕ್ಷಕಿ ಬಾವಿಗೆ ಹಾರಿ ಆತ್ಮಹತ್ಯೆ, ಕಾರಣ ನಿಗೂಢ

ನಮ್ಮ ಪ್ರತಿನಿಧಿ ವರದಿ
ಕಾರ್ಕಳ : ತಾಲೂಕಿನ ಹೆಬ್ರಿಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ತಮ್ಮ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಚಾರಾ ಗ್ರಾಮದ ಕೊಂಡೆಜೆಡ್ಡು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೇದಾವತಿ ಭಟ್ (42) ತ್ಮಹತ್ಯೆ ಮಾಡಿಕೊಂಡವರು. ಹೆಬ್ರಿಯ ಕಿನ್ನಿಗುಡ್ಡೆ ಬಳಿಯ ನಿವಾಸಿ ವೇದಾವತಿ ಕಳೆದ ಹಲವು ವರ್ಷಗಳಿಂದ ಕೊಂಡೆಜೆಡ್ಡು ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಪತಿ ಮುರಳೀಧರ್ ಭಟ್ ಹೆಬ್ರಿ ಸಮೀಪದ ಸೋಮೇಶ್ವರ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ. ವೇದಾವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಶಾಲೆಯಲ್ಲಿ ಭಾನುವಾರ ನಡೆಯಬೇಕಿದ್ದ ರಜತ ಮಹೋತ್ಸವದ ವಿಚಾರವಾಗಿ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರೊಂದಿಗೆ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯವಿತ್ತೆನ್ನಲಾಗಿದೆ. ಶನಿವಾರ ತನ್ನ ಕರ್ತವ್ಯ ಮುಗಿಸಿ ಶಾಲೆಯಿಂದ ಮನೆಗೆ ಬಂದ ವೇದಾವತಿಯವರು ರಾತ್ರಿ ಬಹಳ ಹೊತ್ತಿನವರೆಗೂ ವರದಿಯನ್ನು ಸಿದ್ಧಪಡಿಸುತ್ತಿದ್ದು, ಮನೆಮಂದಿ ಮಲಗಿದ ಬಳಿಕ ತಮ್ಮ ಮನೆಯ ಸಮೀಪದ ಕಿರಣ್ ಶೆಟ್ಟಿ ಎಂಬವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಪತಿ ಎದ್ದು ನೋಡಿದಾಗ ಪತ್ನಿ ವೇದಾವತಿ ಇಲ್ಲದ್ದನ್ನು ಗಮನಿಸಿ ಸುತ್ತಮುತ್ತ ಹುಡುಕಾಡಿದಾಗ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ವೇದಾವತಿಯವರ ತವರು ಮನೆ ಕುಂದಾಪುರದ ಜಪ್ತಿಯಲ್ಲಿದ್ದು, ಇವರ ಸಹೋದರ ಹಾಗೂ ಸಹೋದರಿಯರು ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ವೇದಾವತಿಯವರ ಸೂಕ್ಷ್ಮಮನಸ್ಥಿತಿಯೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇ ಅಥವಾ ಬೇರೆ ಕಾರಣವಿರಬಹುದೇ ಎನ್ನುವುದರ ಕುರಿತು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಶಿಕ್ಷಕಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ರಜತ ಮಹೋತ್ಸವ ಕಾರ್ಯಕ್ರಮ ರದ್ದುಗೊಂಡಿದೆ. ಶಿಕ್ಷಕಿಯ ಸಾವಿನ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲು ಹೆಬ್ರಿ ಪೊಲೀಸರು ಹಿಂದೇಟು ಹಾಕಿದ ಘಟನೆಯೂ ನಡೆದಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.