ವಿದ್ಯಾರ್ಥಿ ಬೆನ್ನಲ್ಲಿ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ

ವಿದ್ಯಾರ್ಥಿ ಬೆನ್ನಲ್ಲಿ ಬಾಸುಂಡೆ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ರಜಾ ಅವಧಿಯಲ್ಲೂ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಬೆನ್ನಲ್ಲಿ ಬಾಸುಂಡೆ ಬರುವಂತೆ ಹೊಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತನ್ನ ತಪ್ಪಿನ ಅರಿವಾಗಿ ಕೊನೆಗೆ ವಿದ್ಯಾರ್ಥಿಗಳನ್ನು ಥಳಿಸಿದ ಪ್ರಭಾರ ಮುಖ್ಯ ಶಿಕ್ಷಕಿ ಕೊನೆಗೂ ಕ್ಷಮೆಯಾಚನೆ ಮಾಡುವ ಮೂಲಕ ಪ್ರಕರಣ ಕೊನೆಗೊಂಡಿದೆ.

ಕುಂದಾಪುರದ ಹೃದಯ ಭಾಗದಲ್ಲಿರುವ ಸರ್ಕಾರಿ ಹೆಣ್ಮಕ್ಕಳ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಭಾರ ಶಿಕ್ಷಕಿ ಒಂದೇ ತರಗತಿಯ ನಾಲ್ಕೈದು ಮಂದಿ ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಂಗಳವಾರ ಬೆಳಿಗ್ಗೆ ಆರೋಪಿ ಶಿಕ್ಷಕಿ ಮಕ್ಕಳ ಮನೆಗೆ ತೆರಳಿ ಪೋಷಕರಲ್ಲಿ ಕ್ಷಮಾಪಣೆ ಕೇಳಿದ್ದಾರೆ.

ಶಿಕ್ಷಕಿ ಕ್ಷಮೆ ಯಾಚಿಸಿದ್ದರಿಂದ ಪೋಷಕರು ಘಟನೆಯ ಬಗ್ಗೆ ಯಾವುದೇ ಪ್ರಕರಣ ದಾಖಲಿಸದೇ ಕ್ಷಮಿಸಿದ್ದಾರೆ ಎನ್ನಲಾಗಿದೆ. ಮಕ್ಕಳ ಪೋಷಕರು ಈ ಪ್ರಕರಣವನ್ನು ಕೊನೆಗೊಳಿಸಿದ್ದರೂ ಸ್ಥಳೀಯರು ಮಕ್ಕಳ ಹಕ್ಕುಗಳ ಕಾಯ್ದೆಯನ್ನು ದುರುಪಯೋಗ ಪಡಿಸುವ ಇಂತಹ ಶಿಕ್ಷಕಿ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.