`ತರ್ಲೆ ಮಾಡಲು ಬರುತ್ತಿದೆ `ತಿಥಿ’ ತಂಡ

ಸರಳ ಥೀಮ್ ಆಧರಿಸಿ ಚಿಕ್ಕ ಬಜೆಟ್ಟಿನಲ್ಲಿ ತಯಾರಾದ `ತಿಥಿ’ ಸಿನಿಮಾ ಭರ್ಜರಿ ಹಿಟ್ ಆಗಿದ್ದು ಇದೀಗ ಇತಿಹಾಸ. `ತಿಥಿ’ ತಂಡದವರಿಂದ ಇದೀಗ ಹೊಸ ಚಿತ್ರ `ತರ್ಲೆ ವಿಲೇಜ್’ ತಯಾರಾಗಿದ್ದು ಅದೀಗ ತೆರೆಗೆ ಬರಲು ಸಜ್ಜಾಗಿದೆ. ಯಶಸ್ವಿಯಾಗಿ ಶೂಟಿಂಗ್ ಮುಗಿಸಿರುವ `ತರ್ಲೆ ವಿಲೇಜ್’ ಈ ವಾರ ಸೆನ್ಸಾರ್ ಅಧಿಕಾರಿಗಳ ಎದುರು ಬರಲಿದೆ.

ಈಗಾಗಲೇ ಟ್ರೈಲರ್ ಮೂಲಕ ಕುತೂಹಲ ಮೂಡಿಸಿರುವ ಈ ಸಿನಿಮಾ, `ತಿಥಿ’ ಚಿತ್ರದಂತೆ ಜನಮನ ಗೆಲ್ಲುವ ವಿಶ್ವಾಸದಲ್ಲಿದೆ. ಈ ಸಿನಿಮಾ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಸುತ್ತುತ್ತದೆ. ಹಳ್ಳಿಯ ಜನರ ಪ್ರೀತಿ-ಪ್ರೇಮ, ಗದ್ದಲ-ಗಲಾಟೆ, ಹಾಸ್ಯ, ನ್ಯಾಯ ಪಂಚಾಯಿತಿ ಎಲ್ಲವನ್ನೂ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಟ್ರೈಲರಿನಲ್ಲಿ ಗಡ್ಡಪ್ಪನ ಮ್ಯಾನರಿಸಂ ಹಾಗೂ ಸೆಂಚುರಿಗೌಡರ ಪೆÇೀಲಿ ಮಾತುಗಳು ಪ್ರೇಕ್ಷಕರಿಗೆ ಮನರಂಜನೆ ಒದಗಿಸಲಿದೆ.

ಚಿತ್ರದಲ್ಲಿ ಗಡ್ಡಪ್ಪ, ಸೆಂಚುರಿ ಗೌಡ ಅಲ್ಲದೇ ತಮ್ಮಣ್ಣ, ಅಭಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಹರ್ಷಿತಾ, ಭಾಗ್ಯಶ್ರೀ, ಸೋಮು, ಸೇರಿದಂತೆ ಸುಮಾರು 70 ಕಲಾವಿದರು ಬಣ್ಣ ಹಚ್ಚಿದ್ದಾರೆ. ಗಡ್ಡಪ್ಪ ಈ ಚಿತ್ರದಲ್ಲಿ ಊರಿನ ಯಜಮಾನನ ಪಾತ್ರದಲ್ಲಿ ಅಭಿನಯಿಸಿದ್ದು, ತಮ್ಮಣ್ಣ ದನಗಳ ವ್ಯಾಪಾರ ಮಾಡುವ ದಲ್ಲಾಳಿಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಕೆ ಎಂ ರಘು ನಿರ್ದೇಶಿಸಿದ್ದಾರೆ.

ಮೈಸೂರಿನ ಬಳಿ `ತರ್ಲೆ ವಿಲೇಜ್’ ಎಂಬ ಹಳ್ಳಿಯ ಸೆಟ್ ನಿರ್ಮಾಣ ಮಾಡಿ, ಮೈಸೂರು ಸುತ್ತಮುತ್ತಾ ಚಿತ್ರೀಕರಣ ಮಾಡಿದ್ದಾರೆ. ಸಿನಿಮಾ ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.