ಟಾರ್ಗೆಟ್ ಗ್ರೂಪ್ ರೌಡಿ ಇಲ್ಯಾಸ್ ಹತ್ಯೆ

ಮಲಗಿದ್ದಾತನ ಮೇಲೆ ಎರಗಿದರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಬಂದ ಟಾರ್ಗೆಟ್ ಗ್ರೂಪ್ಪಿನ ಖತರನಾಕ್ ರೌಡಿಶೀಟರ್ ಇಲ್ಯಾಸ(31)ನನ್ನು ದುಷ್ಕರ್ಮಿಗಳು ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾರೆ.

ನಗರದ ಜಪ್ಪು ಕುಡ್ಪಾಡಿ ಬದ್ರಿಯಾ ಜುಮಾ ಮಸೀದಿ ಪಕ್ಕದಲ್ಲೇ ಇರುವ ಮಿಸ್ತಾ ಗಲೋರೆ ಎನ್ನುವ ಅಪಾರ್ಟಮೆಂಟ್ ಮೊದಲ ಮಹಡಿಯಲ್ಲಿ ರಾತ್ರಿ ಮಲಗಿದ್ದ ಇಲ್ಯಾಸ್ ಮರುದಿನ ಮುಂಜಾನೆ ಏಳುವ ಮೊದಲೇ ದುಷ್ಕರ್ಮಿಗಳು ಇರಿದು ಕೊಲೆಗೈದು ಪರಾರಿಯಾಗಿದ್ದಾರೆ. ಈತ ಮೂಲತಃ ಉಳ್ಳಾಲ ಮಾಸ್ತಿಕಟ್ಟೆಯ ಸುಂದರಿಬಾಗ್ ನಿವಾಸಿ.

ಟಾರ್ಗೆಟ್ ಗ್ರೂಪ್ ಸದಸ್ಯನಾಗಿ, ಲೀಡರ್ ಆಗಿ ಗುರುತಿಸಿಕೊಂಡಿದ್ದ ಮೊಹಮ್ಮದ್ ಇಲ್ಯಾಸ್ ಒಬ್ಬ ಕುಖ್ಯಾತ ರೌಡಿ. 23ಕ್ಕೂ ಹೆಚ್ಚು ಕೊಲೆ, ಸುಲಿಗೆ, ಅಪಹರಣ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿದೆ.

ಜನವರಿ 12ರಂದು ರಾತ್ರಿ ತನ್ನ ಕುಟುಂಬ ಸಮೇತ ಗಲೋರೆ ಪ್ಲ್ಯಾಟಿನಲ್ಲಿ ಊಟ ಮುಗಿಸಿ ಇಲ್ಯಾಸ್ ಮಲಗಿದ್ದ. ಮರುದಿನ ಮುಂಜಾನೆ 9 ಗಂಟೆ ಸುಮಾರಿಗೆ ಇಲ್ಯಾಸ್ ಪತ್ನಿ ಫರ್ಜಾನಾ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದರು. ಈ ಬಗ್ಗೆ ಮಾಹಿತಿ ಪಡೆದ ದುಷ್ಕರ್ಮಿಗಳು ಕೂಡಲೇ ಮಹಡಿ ಮೇಲೆ ತೆರಳಿ ಕಾಲಿಂಗ್ ಬೆಲ್ ಒತ್ತಿದ್ದು, ಇಲ್ಯಾಸ್ ತಾಯಿ ಬಾಗಿಲು ತೆರದಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಇಲ್ಯಾಸ್ ತಾಯಿ, ಸಹೋದರ, ಎರಡು ವರ್ಷದ ಪುತ್ರಿ ಮಾತ್ರ ಇದ್ದರು.

ಕೋಣೆಗೆ ನುಗ್ಗಿದ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಇಲ್ಯಾಸ್ ಎದೆಗೆ ಬಲವಾಗಿ ಇರಿದಿದ್ದು, ರಕ್ತದ ಮಡುವಿನಲ್ಲಿ ಇಲ್ಯಾಸ್ ಒದ್ದಾಡುತ್ತಿದ್ದ. ಈ ನಡುವೆ ಫರ್ಜಾನಾ ಮೊಬೈಲಿಗೆ ಮನೆಯಿಂದ ದೂರವಾಣಿ ಕರೆ ಬಂದಿದ್ದು ಯಾರೋ ಮನೆಗೆ ನುಗ್ಗಿ ಗಂಡನಿಗೆ ಇರಿದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಕೂಡಲೇ ಅವರು ತೆರಳಿ ಗಂಡನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ ಆಸ್ಪತ್ರೆಗೆ ತರುವಷ್ಟರಲ್ಲಿ ಇಲ್ಯಾಸ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇಲ್ಯಾಸ್ ಎದೆಯಲ್ಲಿ ಆಳವಾದ ಗಾಯವಾಗಿದ್ದು, ತಲೆಗೆ, ಕೈ, ತೋಳುಗಳನ್ನು ಕಡಿಯಲಾಗಿದೆ. ಹಾಸಿಗೆ ಮೇಲ್ಭಾಗ ಹಾಗೂ ನೆಲದಲ್ಲಿ ರಕ್ತದ ಕೋಡಿಯೇ ಹರಿದಿತ್ತು.

ಇಲ್ಯಾಸ್ ಶವ ಇರಿಸಲಾಗಿದ್ದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಶವಾಗಾರಕ್ಕೆ ನಗರ ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

2012ರಲ್ಲಿ ಮಂಗಳೂರಿನ ಹೊರವಲಯದ ದೇರಳಕಟ್ಟೆಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಬಲವಂತವಾಗಿ ಆಕೆಯ ಬ್ಲೂಫಿಲ್ಮ್ ತೆಗೆದು ಲೈಂಗಿಕ ಕಿರುಕುಳ ನೀಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಇಲ್ಯಾಸ್ ಪ್ರಮುಖ ಆರೋಪಿಯಾಗಿದ್ದ. ಬಳಿಕ ಪರಾರಿಯಾಗಿದ್ದ ಈತನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. ಯುವತಿಯರನ್ನು, ಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಸಮಯಾವಕಾಶ ನೋಡಿಕೊಂಡು ಅವರ ಮೇಲೆ ಅಟ್ಯಾಕ್ ಮಾಡಿಸುತ್ತಿದ್ದ. ಹಲವು ಯುವತಿಯರನ್ನು ಹನಿಟ್ರ್ಯಾಪ್ ಮಾಡಿ ದೋಚುವುದರಲ್ಲೂ ಈತ ನಿಸ್ಸೀಮನಾಗಿದ್ದ.

ಉಳ್ಳಾಲ ಪರಿಸರದಲ್ಲಿ ಗಾಂಜಾ ವ್ಯವಹಾರದಲ್ಲಿ ಬಹುತೇಕ ಈತನೇ ಬಾಸ್. ಈತನ ವಿರುದ್ಧ ಧ್ವನಿ ಎತ್ತಿದ್ದ ಕಾರಣಕ್ಕೆ ಜುಬೈರ್ ಎಂಬಾತನನ್ನು ಆಯಿಲ್ ಮಿಲ್ ಬಳಿ ಮರ್ಡರ್ ಮಾಡಿದ ಪ್ರಕರಣದಲ್ಲೂ ಇಲ್ಯಾಸ್ ಪ್ರಮುಖ ಆರೋಪಿಯಾಗಿದ್ದಾನೆ. ಎರಡು ತಿಂಗಳ ಹಿಂದೆ ಫರಂಗಿಪೇಟೆಯಲ್ಲಿ ಮೂವರನ್ನು ಕೊಚ್ಚಿ ಕೊಲೆಗೈದ ಪ್ರಮುಖ ಆರೋಪಿ ಇಲ್ಯಾಸ್ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದ. ಈತನ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲಾಗಿತ್ತು.

ಉಳ್ಳಾಲದಲ್ಲಿ ಟಾರ್ಗೆಟ್ ಎನ್ನುವ ರೌಡಿಗಳ ತಂಡ ಕಟ್ಟಿಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದ ಈತ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ. ಆದರೆ ಸೋತ ಹಿನ್ನೆಲೆಯಲ್ಲಿ ಈತ ಉಪಾಧ್ಯಕ್ಷನಾಗಿ ಆಯ್ಕೆಗೊಂಡಿದ್ದ. ಜಿಲ್ಲೆಯ ಇಬ್ಬರು ಪ್ರಭಾವಿ ರಾಜಕಾರಣಿಗಳ ನಂಟು ಹೊಂದಿದ್ದ ಈತ ಯಾವುದೇ ಪ್ರಕರಣಗಳೂ ದಾಖಲಾಗದಂತೆ ಅವರ ಮೂಲಕ ವಶೀಲಿಬಾಜಿ ಮಾಡಿಕೊಂಡು ಸುಲಭದಲ್ಲೇ ತಪ್ಪಿಸಿಕೊಳ್ಳುತ್ತಿದ್ದ. ಪಾಂಡೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.

3 ಪ್ರತ್ಯೇಕ ತಂಡ ರಚನೆ

ಆರೋಪಿಗಳ ಪತ್ತೆಗೆ ಪೊಲೀಸರ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಮೃತ ಇಲ್ಯಾಸ್ ಕಳೆದ 6 ತಿಂಗಳಿನಿಂದ ಮಿಸ್ಬಾ ಅಪಾರ್ಟಮೆಂಟಿನಲ್ಲಿದ್ದ. ಈತನ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡೇ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆರೋಪಿ ವಿರುದ್ಧ ಸಾಕಷ್ಟು ಪ್ರಕರಣಗಳಿದ್ದು, ಈತ ರೌಡಿಶೀಟರ್. ಉಳ್ಳಾಲದಲ್ಲಿ ಗೂಂಡಾ ಆ್ಯಕ್ಟ್ ಪ್ರಕಾರ ಈತನನ್ನು ಬಂಧಿಸಲಾಗಿತ್ತು. ಮೂರು ದಿನಗಳ ಹಿಂದೆಯಷ್ಟೇ ಈತ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಮೃತ ಇಲ್ಯಾಸ್ ಪತ್ನಿ ಫರ್ಜಾನಾ ನೀಡಿರುವ ದೂರಿನ ಪ್ರಕಾರ ಗ್ಯಾಂಗ್ ವಾರಿನಿಂದ ಈ ಕೊಲೆ ನಡೆದಿದೆ. ದಾವೂದ್, ಸಫ್ವಾನ್ ಗ್ಯಾಂಗಿಗೆ ಇಲ್ಯಾಸ್ ಮೇಲೆ ದ್ವೇಷ ಇತ್ತು. ಅವರ ಕಡೆಯವರು ಬಂದು ಈ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

LEAVE A REPLY