ಯೋಗದಲ್ಲಿ ವಿಶ್ವ ದಾಖಲೆಯ ಗೋಲ್ಡನ್ ಬುಕ್ ಪುಟಕ್ಕೆ ಸೇರಿದ 8ರ ಬಾಲಕಿ ತನುಶ್ರೀ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಸೈಂಟ್ ಮೇರೀಸ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ, ಇದೀಗ ಯೋಗದಲ್ಲಿ ಹೊಸ ದಾಖಲೆ ನಿರ್ಮಿಸಿ ವಿಶ್ವ ದಾಖಲೆಯ ಗೋಲ್ಡನ್ ಬುಕ್ಕಿನಲ್ಲಿ ಸೇರ್ಪಡೆಯಾಗಿದ್ದಾಳೆ. ನೃತ್ಯ ಬಲ್ಲವಳಾಗಿರುವ ಈಕೆ ಕೇವಲ ಐದು ತಿಂಗಳು ಯೋಗ ತರಬೇತಿ ಪಡೆದು ಈ ದಾಖಲೆ ನಿರ್ಮಿಸಿದ್ದಾಳೆ. ಉಡುಪಿಯ ಲಯನ್ಸ್ ಭವನದಲ್ಲಿ ತನುಶ್ರೀ ಈ ದಾಖಲೆಯನ್ನು ನಿರ್ಮಿಸಿದ್ದಾಳೆ. ಈಕೆ ಒಂದು ನಿಮಿಷದ ಅದ್ಭುತ ವಿಭಾಗದಲ್ಲಿ `ನಿರ್ಮಲಾಂಬ ಪೂರ್ಣ ಚಕ್ರಾಸನ’ 19 ಬಾರಿ ಮಾಡಿ ಈ ದಾಖಲೆ ನಿರ್ಮಿಸಿದ್ದಾಳೆ.

ವಿಶ್ವ ದಾಖಲೆ ಗೋಲ್ಡನ್ ಬುಕ್ ಪ್ರತಿನಿಧಿ ಸಂತೋಷ್ ಅಗರ್ವಾಲ್ ತನುಶ್ರೀ ಪ್ರದರ್ಶನವನ್ನು ವೀಕ್ಷಿಸಿದ್ದು, ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ. ವಿದ್ಯುತ್ ಕಾಂಟ್ರಾಕ್ಟರ್ ಉದಯ್ ಕುಮಾರ್ ಮತ್ತು ಗೃಹಿಣಿ ಸಂಧ್ಯಾರ ಪುತ್ರಿಯಾದ ತನುಶ್ರೀ ಮೂರೂವರೆ ವರ್ಷದಿಂದಲೇ ನೃತ್ಯಾಭ್ಯಾಸ ಆರಂಭಿಸಿದ್ದಳು. ರಾಜ್ಯಾದ್ಯಂತ ಸುಮಾರು 269ಕ್ಕೂ ಹೆಚ್ಚು ಸ್ಟೇಜ್ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ತನುಶ್ರೀ ಭರತನಾಟ್ಯ, ಹಿಪ್ಪಾಪ್ ಮತ್ತು ಸೆಮಿ ಕ್ಲಾಸಿಕಲ್ ನೃತ್ಯಗಳನ್ನು ಉಡುಪಿಯ ಮುಕುಂಥ ಕೃಪಾ ಮ್ಯೂಸಿಕ್ ಮತ್ತು ಫೈನ್ ಆಟ್ರ್ಸಿನಲ್ಲಿ ಕಲಿಯುತ್ತಿದ್ದಾಳೆ.

“ಮಗಳು ಯೋಗ ತರಗತಿಗೆ ಹೋಗುವುದಿಲ್ಲ. ನೃತ್ಯಾಭ್ಯಾಸದಿಂದಾಗಿ ಆಕೆಗೆ ಯೋಗ ಬಹಳ ಸುಲಭವಾಗಿದೆ” ಎಂದು ತಂದೆ ಉದಯಕುಮಾರ್ ಹೇಳಿದ್ದಾರೆ.

“ಐದು ತಿಂಗಳ ಹಿಂದೆ ಮೈಸೂರಿನ ಕುಶಿ ಎಂಬ ಬಾಲಕಿ ಒಂದು ನಿಮಿಷದಲ್ಲಿ 15 ಬಾರಿ ಇದೇ ಚಕ್ರಾಸನ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಳು. ನಾನು ಸಾಂದರ್ಭಿಕವೆಂಬಂತೆ ಮಗಳಲ್ಲಿ ನೀನು ಕೂಡ ಮಾಡಬಹುದು ಎಂದು ಹೇಳಿದ್ದೆ. ತರಬೇತಿ ಇಲ್ಲದೆ ಆಕೆ ಅದನ್ನು 9 ಬಾರಿ ಮಾಡಿದ್ದಳು. ಹಾಗಾಗಿ ನಾನು ಆಕೆಗೆ ತರಬೇತಿ ಕೊಡಿಸಲು ನಿರ್ಧರಿಸಿದೆ. ಕುಶಿಯ ದಾಖಲೆ ಮುರಿಯಲು ಮಗಳು 16 ಬಾರಿ ಮಾಡಬೇಕಿತ್ತು. ಆದರೆ ಆಕೆ 19 ಬಾರಿ ಮಾಡಿದ್ದಾಳೆ. ಅವಳ ಈ ಸಾಧನೆಗೆ ನಾನು ನಿಜಕ್ಕೂ ಹೆಮ್ಮೆ ಪಡುತ್ತೇನೆ.

ನಾನು ಆಕೆಯನ್ನು ಗಿನ್ನೆಸ್ ದಾಖಲೆಗೆ ಸಿದ್ಧಪಡಿಸಬೇಕೆಂದು ಬಯಸಿದ್ದೇನೆ. ಆದರೆ ಅವರು ಈ ವಿಭಾಗವನ್ನು ಹೊಂದಿಲ್ಲ, ಲಿಮ್ಕಾ ಬುಕ್ ದಾಖಲೆಯಲ್ಲೂ ಇಲ್ಲ. ಗೆಳೆಯನ ಸಹಾಯದಿಂದ ನಾನು ವಿಶ್ವದಾಖಲೆಯ ಗೋಲ್ಡನ್ ಬುಕ್ ಅರ್ಜಿಯನ್ನು ಭರ್ತಿ ಮಾಡಿದ್ದೇನೆ. ಈ ಕಾರ್ಯಕ್ರಮಕ್ಕೆ ಒಟ್ಟು 75,000 ರೂ ಖರ್ಚು ಮಾಡಿದ್ದೇವೆ” ಎಂದು ಉದಯಕುಮಾರ್ ಹೇಳಿದ್ದಾರೆ.