ಹಕ್ಕುಪತ್ರ, ಮನೆ ನಂಬ್ರ ನೀಡುವಂತೆ ತಣ್ಣೀರುಬಾವಿ ನಿವಾಸಿಗಳ ಆಗ್ರಹ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹಕ್ಕು ಪತ್ರ ಮತ್ತು ಮನೆ ನಂಬರ್ ನೀಡುವಂತೆ ಆಗ್ರಹಿಸಿ ನಗರದ ಹೊರವಲಯದ ತಣ್ಣೀರುಬಾವಿ ಬೀಚ್ ನಿವಾಸಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಡಿವೈಎಫೈ-ಸಿಪಿಎಂ ತಣ್ಣೀರುಬಾವಿ ಘಟಕದ ನೇತೃತ್ವದಲ್ಲಿ ಧರಣಿ ನಡೆಯಿತು.

ತಣ್ಣೀರುಬಾವಿ ಪ್ರದೇಶದಲ್ಲಿ ವಾಸವಾಗಿರುವ ಮುನ್ನೂರಕ್ಕೂ ಹೆಚ್ಚಿನ ಕುಟುಂಬಗಳಿಗೆ ಸಿ ಆರ್ ಝಡ್ ವಲಯದ ಹೆಸರಿನಲ್ಲಿ ಸರಕಾರ, ಜಿಲ್ಲಾಡಳಿತ, ನಗರಾಡಳಿತಗಳು ಮನೆ ನಿವೇಶನದ ಹಕ್ಕುಪತ್ರ ಹಾಗೂ ಮನೆ ನಂಬ್ರಗಳನ್ನು ನಿರಾಕರಿಸುತ್ತಾ ಬಂದಿದೆ. ಆದರೆ ಅದೇ ಆಡಳಿತಗಳು ಖಾಸಗಿ ಪ್ರವಾಸೋದ್ಯಮ ಸಂಸ್ಥೆಗಳಿಗೆ ಬೇಕಾದಷ್ಟು ಭೂಮಿ ಕೊಡಲು ಮುಂದಾಗಿವೆ. ತಲಾಂತರದಿಂದ ವಾಸವಾಗಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡದೆ, ಹೊರಗಿನ ಖಾಸಗಿ ಉದ್ಯಮಿಗಳಿಗೆ ತಣ್ಣೀರುಬಾವಿಯ ಭೂಮಿ ನೀಡುವುದನ್ನು ತಾವು ತಡೆಯುವುದಾಗಿ ತಣ್ಣೀರುಬಾವಿ ನಾಗರಿಕರ ಪರವಾಗಿ ವಿವಿಧ ಸಂಘಟನೆಗಳ ನಾಯಕರು ಎಚ್ಚರಿಸಿದರು.

ನಗರ ಪಾಲಿಕೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ತಣ್ಣೀರುಬಾವಿ ನಾಗರಿಕರು ನಡೆಸುತ್ತಿರುವ ಐದನೇ ಪ್ರತಿಭಟನೆ ಇದಾಗಿದೆ. ಆ ಪ್ರದೇಶದ ಮುನ್ನೂರಕ್ಕೂ ಹೆಚ್ಚಿನ ಕುಟುಂಬಗಳಲ್ಲಿ ಮೀನುಗಾರರು, ಕಟ್ಟಡ ಕಾರ್ಮಿಕರು ಇತ್ಯಾದಿ ಶ್ರಮಜೀವನ ನಡೆಸುವ ಜನರೇ ಇದ್ದಾರೆ. ದಲಿತರು, ಮುಸ್ಲಿಮರು, ಹಿಂದೂ ಜನ ಸಮುದಾಯ ವಾಸವಾಗಿರುವ ಪ್ರದೇಶವಿದು. ದೀರ್ಘಕಾಲದಿಂದ ಪದೇಪದೇ ಆಡಳಿತಕ್ಕೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ತಣ್ಣೀರುಬಾವಿಯು ಸಿ ಆರ್ ಝಡ್ ವಲಯ ವ್ಯಾಪ್ತಿಯಲ್ಲಿ ಬರುತ್ತಿರುವುದರಿಂದ, ಅಲ್ಲಿ ಮನೆಗಳಿಗೆ ಹಕ್ಕುಪತ್ರ ನಿರಾಕರಿಸಲಾಗುವುದಾಗಿ ಆಡಳಿತಗಾರರು ಹೇಳುತ್ತಾರೆ. ಹಾಗಿದ್ದಲ್ಲಿ ಖಾಸಗಿ ಪ್ರವಾಸೋಧ್ಯಮಿಗಳು ಅಲ್ಲಿ ತಮ್ಮ ಜಾಗ ಗುರುತಿಸಲು ಬಂದುದು ಏಕೆ ಎಂದು ಸಿಪಿಐ(ಎಂ) ಮಂಗಳೂರು ಉತ್ತರ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕೊಂಚಾಡಿ ಪ್ರಶ್ನಿಸಿದರು.

ಡಿ ವೈ ಎಫೈ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ಶಮೀನಾ ಬಾನು ಮೊದಲಾದವರು ಮಾತನಾಡಿದರು.