ಮನೆಯಲ್ಲಿರಲು ಭಯಪಡುತ್ತಿರುವ ತಂಡ್ರಗುಳಿ ಗ್ರಾಮಸ್ಥರು

 ಗುಡ್ಡ ಕುಸಿದು 3 ಮಕ್ಕಳ ದುರ್ಮರಣ ಬಳಿಕ ಜನರಲ್ಲಿ ಆತಂಕ

ನಮ್ಮ ಪ್ರತಿನಿಧಿ ವರದಿ

ಬೈಂದೂರು/ಕುಮಟಾ : ಉತ್ತರ ಕನ್ನಡದ ಕುಮಟಾ ತಾಲೂಕಿನ ತಂಡ್ರಗುಳಿ ಗ್ರಾಮದಲ್ಲಿ ಕಳೆದ ವಾರ ಉಂಟಾದ ಗುಡ್ಡ ಕುಸಿತದಲ್ಲಿ ಮೂವರು ಮಕ್ಕಳು ಮೃತಪಟ್ಟ ನಂತರ ಆ ಗ್ರಾಮದ ಜನ ರಾತ್ರಿ ವೇಳೆ ಜೋರಾಗಿ ಮಳೆ ಸುರಿಯುವಾಗ ಮನೆಯೊಳಗಿರಲು ಭಯ ಪಡುತ್ತಾರೆ. ಹಲವರು ಮಳೆಯ ರಾತ್ರಿಗಳನ್ನು ತಮ್ಮ ಸಂಬಂಧಿಕರ ಅಥವಾ ಸ್ನೇಹಿತರ ಮನೆಗಳಲ್ಲಿ ಕಳೆಯುತ್ತಾರೆ.

“ಇಲ್ಲಿಯ ತನಕ ನಾವು ಕೇವಲ ಅಘನಾಶಿನಿಯ ನೆರೆಯ ಬಗ್ಗೆ ಕಳವಳ ಹೊಂದಿದ್ದೆವು. ಆದರೆ ಈಗ ನಾವು ಈ ಗುಡ್ಡ ಹಾಗೂ ನದಿಯ ನಡುವೆ ಸಿಲುಕಿದ್ದೇವೆ” ಎಂದು ಸುಮಾರು 48 ಕುಟುಂಬಗಳು ವಾಸಿಸುವ ಈ ಗ್ರಾಮದ ಮುಖ್ಯಸ್ಥ ಗಣಪಯ್ಯ ಹೇಳುತ್ತಾರೆ. ಈ ಗ್ರಾಮದಲ್ಲಿರುವ ಮನೆಗಳು ಹೊಸದಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 66 ಹಾಗೂ ನದಿಯ ನಡುವೆ ಇರುವ ಒಂದು ಸಣ್ಣ ತುಂಡು ಭೂಮಿಯ ಮೇಲಿದೆ.

“ಬೇಸಿಗೆ ಸಮಯದಲ್ಲಿ ಗುಡ್ಡವನ್ನು ಕಡಿಯಲು ಅನಿಯಂತ್ರಿತವಾಗಿ ಸ್ಫೋಟಕಗಳನ್ನು ಬಳಸುವುದನ್ನು ನಾವು ವಿರೋಧಿಸಿದರೂ ಯಾವುದೇ ಪ್ರಯೋಜನವಾಗಿಲ್ಲ” ಎನ್ನುತ್ತಾರೆ ಗಣಪಯ್ಯ. “ಮೊದಲು ಗುಡ್ಡದ ಮಣ್ಣು ಮನೆಗಳ ಮೇಲೆ ಜರಿದು ಮನೆಗಳನ್ನು ಹಾನಿಗೊಳಿಸಿದರೆ ನಂತರ ಗುಡ್ಡ ಕುಸಿತ ಮೂವರು ಮಕ್ಕಳನ್ನು ಬಲಿ ಪಡೆದುಕೊಂಡಿದೆ. ನಾವು ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆಯಾದರೂ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿಲ್ಲ” ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕಾಗಿ ಐಆರ್ಬಿ ವೆಸ್ಟ್ ಕೋಸ್ಟ್ ಟೋಲ್ವೇ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕರ್ನಾಟಕ-ಗೋವಾ ಗಡಿ ತನಕದ ಈ ಚತುಷ್ಪಥ ಕಾಮಗಾರಿಯನ್ನು ರೂ 2,639 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿತ್ತು. ಆದರೆ ಈ ಯೋಜನೆ ಕೈಗೆತ್ತಿಕೊಂಡಂದಿನಿಂದ ಬೈಂದೂರಿನ ಒತ್ತಿನೆಣೆಯಲ್ಲಿ ಆಗಾಗ ಭೂಕುಸಿತ ಉಂಟಾಗುತ್ತಲೇ ಇದೆ.

ಗುಡ್ಡ ಕಡಿತದ ಪರಿಣಾಮವಾಗಿ ಕಳೆದ ವರ್ಷ ಪಡುವರಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳಿಗೆ ಮಣ್ಣು ನುಗ್ಗಿದ್ದನ್ನು ನೆನಪಿಸುವ ಸ್ಥಳೀಯರು ಈ ನಿಟ್ಟಿನಲ್ಲಿ ಪ್ರಾಧಿಕಾರ ಹಾಗೂ ಐಆರ್ಬಿ ಯಾವುದೇ ಪರಿಹಾರೋಪಾಯಗಳನ್ನು ಕೈಗೊಳ್ಳದೇ ಇರುವುದರಿಂದ ಇನ್ನು ಮುಂದೆಯೂ ಇಲ್ಲಿ ಮಳೆಗಾಲದ ಸಂದರ್ಭ ಭೂಕುಸಿತ ಉಂಟಾಗುವ ಭಯವಿದೆ ಎಂದು ಹೇಳುತ್ತಾರೆ.

ರಸ್ತೆ ಕೆಲಸದ ಗುತ್ತಿಗೆ ವಹಿಸಿರುವ ಐಆರ್ಬಿ ಸಂಸ್ಥೆ ಗುಡ್ಡದ ಸ್ಲೋಪ್/ಸ್ಟೆಪ್ ಕಟ್ಟಿಂಗ್ ಮಾಡುವ ಬದಲು ಸ್ಟೀಪ್ ಕಟ್ಟಿಂಗ್ ಮಾಡಿರುವುದರಿಂದ  ಕೆಳಗಿನ ಮಣ್ಣು ಸಡಿಲಗೊಂಡು ಭೂಕುಸಿತವುಂಟಾಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.