ಜಲ್ಲಿಕಟ್ಟು ಕ್ರೀಡೆಗೆ ಕಾಲಿವುಡ್ ಬೆಂಬಲ

ಚೆನ್ನೈ : ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಗೂಳಿ ಕಾಳಗ ಕ್ರೀಡೆಯ ಪರವಾಗಿ ತಮಿಳುನಾಡು ರಾಜ್ಯದಾದ್ಯಂತ ಪ್ರತಿಭಟನೆಗಳು ತೀವ್ರವಾಗಿದ್ದು ಮೂರನೆಯ ದಿನ ಪ್ರವೇಶಿಸಿದೆ. ಈ ಹೋರಾಟಕ್ಕೆ ಈಗ ತಮಿಳು ಚಿತ್ರರಂಗದ ದಿಗ್ಗಜರು ಒಕ್ಕೊರಲ ಬೆಂಬಲ ಸೂಚಿಸಿದ್ದಾರೆ.

ತಮಿಳುನಾಡಿನ ಸ್ಫೂರ್ತಿಯಾಗಿರುವ ಈ ಕ್ರೀಡೆಯನ್ನು ಬೆಂಬಲಿಸಲು ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಶುಕ್ರವಾರ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಪನ್ನೀರ್‍ಸೆಲ್ವಂ ಮತ್ತು ಪ್ರಧಾನಿ ಮೋದಿಯ ಭೇಟಿ ಫಲಪ್ರದವಾಗದ ಹಿನ್ನೆಲೆಯಲ್ಲಿ ರಹಮಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

jallikattu actors

ಇದಕ್ಕೂ ಮುನ್ನ ನಟ ಸಿಂಬು ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು ನಿಷೇಧ ತೆರವುಗೊಳಿಸುವವರೆಗೂ ತಮ್ಮ ಜಾಗದಿಂದ ಕದಲುವುದಿಲ್ಲ ಎಂದು ಹೇಳಿದ್ದಾರೆ.

ಪುದಿಯ ತಲೈಮುರೈ ಚರ್ಚೆಯಲ್ಲಿ ಭಾಗವಹಿಸಿದ್ದ ನಿರ್ದೇಶಕ ಅಮೀರ್ ಪ್ರಾಣಿದಯಾ ಸಂಘ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  ಕಾಲಿವುಡ್ಡಿನಲ್ಲಿ ಪೇಟಾ ಸಂಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ನಟ ವಿಜಯ್ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಗತ್ತಿನ ಎಲ್ಲ ದೇಶಗಳಲ್ಲಿ ಜನರ ಹಕ್ಕು ಮತ್ತು ಸಂಸ್ಕøತಿಯನ್ನು ರಕ್ಷಿಸಲು ಕಾನೂನು ರೂಪಿಸಲಾಗುತ್ತದೆಯೇ ಹೊರತು ಕಿತ್ತುಕೊಳ್ಳುವುದಕ್ಕಲ್ಲ ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ.

ತಾವು ಒಬ್ಬ ತಮಿಳು ಪ್ರಜೆಯಾಗಿ ರಾಜ್ಯದ ಪ್ರತಿಷ್ಠೆಯ ಸಂಕೇತವಾದ ಜಲ್ಲಿಕಟ್ಟು ಕ್ರೀಡೆಗೆ ಬೆಂಬಲ ಸೂಚಿಸುತ್ತೇನೆ ಎಂದು ನಟ ಜಯರಾಮ್ ರವಿ ಹೇಳಿದ್ದಾರೆ. ಪೇಟಾ ತಮಿಳು ಸಂಸ್ಕøತಿಯನ್ನು ಅರಿತಿಲ್ಲವಾದ್ದರಿಂದ ಇಲ್ಲಿನ ಜನರ ಭಾವನೆಗಳನ್ನು ಗ್ರಹಿಸಲು ಸಾಧ್ಯವಿಲ್ಲ ಎಂದು ರವಿ ಹೇಳಿದ್ದಾರೆ.

ಮತ್ತೋರ್ವ ನಟ ವಿವೇಕ್ ತಮಿಳುನಾಡಿನ ಜನತೆಯ ಜಲ್ಲಿಕಟ್ಟು ಪರ ಪ್ರತಿಭಟನೆ ಮತ್ತು ಹೋರಾಟವನ್ನು ಕ್ರಾಂತಿಕಾರಿ ಹೋರಾಟ ಎಂದು ಬಣ್ಣಿಸಿದ್ದು ಯಾವುದೇ ರಾಜಕೀಯ ಪಕ್ಷದ ಹಂಗಿಲ್ಲದೆ ಈ ಹೋರಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಜಲ್ಲಿಕಟ್ಟು ಕ್ರೀಡೆಯಲ್ಲಿ ಗೂಳಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ಆರೋಪಿಸಿ ಪೇಟಾ ಸಂಘಟನೆ ನ್ಯಾಯಾಲಯದ ಮೊರೆ ಹೊಕ್ಕಿದ್ದು ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಲು ಆಗ್ರಹಿಸಿದೆ. ಆದರೆ ಈ ಪ್ರತಿಪಾದನೆಯನ್ನು ಅಲ್ಲಗಳೆಯುವ ಜಿ ವಿ ಪ್ರಕಾಶ್ ಜಲ್ಲಿಕಟ್ಟು ಕೇವಲ ಪ್ರಾಣಿ ಹಿಂಸೆಯಿಂದ ಕೂಡಿಲ್ಲ, ಗೂಳಿಯೂ ಸಹ ತಮಿಳುನಾಡಿನ ಕುಟುಂಬ ಸಂಸ್ಕøತಿಯ ಅಂಗ ಎಂದು ಹೇಳಿದ್ದಾರೆ.  ಲೇಡಿ ಸೂಪರ್ ಸ್ಟಾರ್ ಎಂದೇ ಪ್ರಸಿದ್ಧಿಪಡೆದಿರುವ ನಯನ್ ತಾರಾ ಜಲ್ಲಿಕಟ್ಟು ಹೋರಾಟದಲ್ಲಿ ಯುವಜನತೆ ಭಾಗವಹಿಸಿರುವುದನ್ನು ಶ್ಲಾಘಿಸಿದ್ದಾರೆ.