ಅಜಯ್ ಚಿತ್ರದಲ್ಲಿ ತಮನ್ನಾ

ಅಜಯ್ ದೇವಗನ್ ಹಾಗೂ ತಮನ್ನಾ ಭಾಟಿಯಾ `ದೃಶ್ಯಂ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈಗ ಮತ್ತೆ ಅವರು ಜೊತೆಯಾಗುತ್ತಿದ್ದಾರೆ. ಆದರೆ ಈ ಬಾರಿ ತೆರೆಯ ಮೇಲೆ ಜೋಡಿಯಾಗಿ ಅಲ್ಲ, ಬದಲಾಗಿ ಅಜಯ್ ಪ್ರೊಡ್ಯೂಸ್ ಮಾಡುತ್ತಿರುವ ಸಿನಿಮಾದಲ್ಲಿ ತಮನ್ನಾ ಹಿರೋಯಿನ್.

ತಮಿಳಿನ ರಾಷ್ಟ್ರ ಪ್ರಶಸ್ತಿ ವಿಜೇತ `ಜಿಗರ್ತಂಡಾ’ ಎನ್ನುವ ಚಿತ್ರವನ್ನು ಅಜಯ್ ಹಿಂದಿಗೆ ರಿಮೇಕ್ ಮಾಡುತ್ತಿದ್ದು ಅದರಲ್ಲಿ ಸಂಜಯ್ ದತ್ ಹಾಗೂ ಫರ್ಹಾನ್ ಅಕ್ತರ್ ಪ್ರಮುಖ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಈ ಸಿನಿಮಾಗೆ ಈಗ ತಮನ್ನಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಸದ್ಯ ಆಕೆ ತೆಲುಗಿಗೆ ರಿಮೇಕ್ ಆಗುತ್ತಿರುವ ಹಿಂದಿಯ `ಕ್ವೀನ್’ ಚಿತ್ರದಲ್ಲಿ ನಟಿಸುತ್ತಿದ್ದು ಅದಾದ ಬಳಿಕ ದೇವಗನ್ ಚಿತ್ರದ ಶೂಟಿಂಗಿನಲ್ಲಿ ಭಾಗವಹಿಸಲಿದ್ದಾಳೆ.

ಈ ಸಿನಿಮಾಗೆ `ದೃಶ್ಯಂ’ ಡೈರೆಕ್ಟರ್ ನಿಶಿಕಾಂತ್ ಕಾಮತ್ ಆಕ್ಷನ್ ಕಟ್ ಹೇಳುತ್ತಿದ್ದು ಮೂಲ ಚಿತ್ರವನ್ನು ಬಾಲಿವುಡ್ಡಿಗೆ ಬೇಕಾದ ರೀತಿಯಲ್ಲಿ ಕೆಲವು ಮಾರ್ಪಾಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂಲ ಚಿತ್ರ ಮಧುರೈನಲ್ಲಿ ಶೂಟಿಂಗ್ ಮಾಡಿದ್ದರೆ ಹಿಂದಿ ಚಿತ್ರಕ್ಕೆ ಮಹಾರಾಷ್ಟ್ರದ ಹಳ್ಳಿಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.