ಗ್ರಾಮಸಭೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲು ಒತ್ತಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ: ಗ್ರಾಮಸಭೆಯಲ್ಲಿ ಗ್ರಾಮಸ್ಥರು ಗ್ರಾಮ ಮಟ್ಟದ ಅಧಿಕಾರಿಗಳಿಂದಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದ್ದು, ಗ್ರಾಮಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ಮಡಾಮಕ್ಕಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

ಪಂಚಾಯತ್ ವ್ಯಾಪ್ತಿಯಲ್ಲಿ ತೆಂಕುಬೆಪ್ಡೆಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಪರಿಹಾರ ನೀಡಲು ವಿಳಂಬವಾದ ಕುರಿತು, ಗ್ರಾಮದ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುವ ಜಲಾನಯನ ಸಮಿತಿಗಳ ಶೀಘ್ರ ರಚನೆ, ಮಳೆಗಾಲದಲ್ಲಿ ಪಂಚಾಯತ್ ರಸ್ತೆಗಳು ಹಾಗೂ ಚರಂಡಿ ದುರಸ್ತಿ, ರಬ್ಬರ್ ಕೃಷಿಗೆ ಬೆಳೆ ವಿಮೆ ಅಥವಾ ಪರಿಹಾರ, ವಿದ್ಯುತ್ ಲೈನ್ ದುರಸ್ತಿಯಲ್ಲಿ ವಿಳಂಬ, ಆವರಣವಿಲ್ಲದ ಶಾಲಾ ಬಾವಿ ಇತ್ಯಾದಿ ವಿಚಾರಗಳನ್ನು ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿದರು.

ಪಂಚಾಯತ್ ವ್ಯಾಪ್ತಿಗೆ ಬರುವ ದುರ್ಗಮ ಪ್ರದೇಶವಾದ ಹಂಜದ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಲಾಯಿತು. “ಅರಣ್ಯ ಸಂಪತ್ತು ಲೂಟಿ ಮಾಡುವ ಕೆಲವರ ಮೇಲಷ್ಟೇ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದ್ದು, ತಾರತಮ್ಯ ಎಸಗಲಾಗುತ್ತಿದೆ” ಎಂದು ಗ್ರಾಮಸ್ಥರು ಆರೋಪಿಸಿದರು.


ಗ್ರಾಮಸಭೆಯಲ್ಲಿ ಅನುದಾನ ಪ್ರಶ್ನಿಸಿದ್ದಕ್ಕೆ ಜಾತಿ ನಿಂದನೆ : ಪ್ರಕರಣ ದಾಖಲು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ರಸ್ತೆಯೊಂದಕ್ಕೆ ಅನುದಾನ ಇಡುವ ವಿಚಾರದಲ್ಲಿ ಗ್ರಾಮಸಭೆಯಲ್ಲಿ ಪ್ರಶ್ನೆ ಕೇಳಿದ ಕಾರಣಕ್ಕಾಗಿ ಕುಪಿತಗೊಂಡ ವ್ಯಕ್ತಿಯೊಬ್ಬ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರಿಗೆ ಜಾತಿ ನಿಂದಿಸಿ ಅವಾಚ್ಯವಾಗಿ ಬೈದು ಜೀವಬೆದರಿಕೆಯೊಡ್ಡಿರುವ ಘಟನೆ ಕುಕ್ಕೇಡಿಯಲ್ಲಿ ನಡೆದಿದೆ.

ಕುಕ್ಕೇಡಿ ಗ್ರಾಮದ ಬೋರ್ಡೇಲು ಎಂಬಲ್ಲಿನ ನಿವಾಸಿ ಸಂತೋಷ್ ನಿಟ್ಟಡೆ ಗ್ರಾಮದ ನಿವಾಸಿ ಕಾರ್ತಿಕ್ ಎಂಬವರಿಗೆ ಜಾತಿ ನಿಂದನೆಗೈದು ಅವಾಚ್ಯವಾಗಿ ಬೈಯ್ದು ಜೀವ ಬೆದರಿಕೆಯೊಡ್ಡಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರ್ಡೇಲು ರಸ್ತೆ ದುರಸ್ತಿ ಕಾಮಗಾರಿಗೆ ಅನುದಾನ ಇಡುವ ವಿಚಾರ ವರದಿಯಲ್ಲಿ ಪ್ರಸ್ತಾಪಗೊಂಡಾಗ “ಇದೇ ರಸ್ತೆಯು ಒಂದೂವರೆ ವರ್ಷದ ಹಿಂದೆಯಷ್ಟೇ ಕಾಂಕ್ರೀಟೀಕರಣದೊಂದಿಗೆ ಅಭಿವೃದ್ಧಿಗೊಂಡಿದ್ದು ಇದೇ ರಸ್ತೆಗೆ ಮತ್ತೊಮ್ಮೆ ಅನುದಾನ ಇಡುವ ಬದಲು ಹದಗೆಟ್ಟ ಬೇರೆ ರಸ್ತೆಗೆ ಈ ಅನುದಾನವನ್ನು ವಿನಿಯೋಗಿಸಬಹುದಲ್ಲ ಎಂದು ಕಾರ್ತಿಕ್ ಅಭಿಪ್ರಾಯ ಪಟ್ಟಿರುವುದು ಸಂತೋಷ್ ಕೆರಳಲು ಕಾರಣವಾಯಿತು. ಅನುದಾನ ಇಡಬೇಕೆಂದು ಪ್ರಸ್ತಾಪಿಸಲ್ಪಟ್ಟ ರಸ್ತೆಯು ಸಂತೋಷ್ ಮನೆಗೆ ಹೋಗುವ ರಸ್ತೆಯಾಗಿದ್ದು, ಈ ರಸ್ತೆಗೆ ಅನುದಾನ ಇಡುವುದಕ್ಕೆ ಕಾರ್ತಿಕ್ ಆಕ್ಷೇಪಿಸಿದ್ದೇ ಜಾತಿನಿಂದನೆ ಮತ್ತು ಜೀವಬೆದರಿಕೆಗೆ ಕಾರಣ ಎಂದು ಆರೋಪಿಸಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.