ಜಿಲ್ಲಾಧ್ಯಕ್ಷರಿಂದ ಕಿರುಕುಳ : ದಲಿತ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ರಾಜೀನಾಮೆ

ಸಾಂದರ್ಭಿಕ ಚಿತ್ರ

ಪುತ್ತೂರಿನಲ್ಲಿ ಹೊಸ ಸಂಘಟನೆಯ ಉದಯ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : “ದ ಕ ಜಿಲ್ಲಾ ದಲಿತ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರು ಕಿರುಕುಳ ನೀಡುತ್ತಿರುವ ಕಾರಣ ಸಮಿತಿಯ ತಾಲೂಕು ಅಧ್ಯಕ್ಷನಾದ ನಾನು ಮತ್ತು ಇತರೆ ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದೇವೆ” ಎಂದು ದಲಿತ ಸೇವಾ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಗಿರಿಧರ್ ನಾಯ್ಕ್ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಗಿರಿಧರ್ ನಾಯ್ಕ್, “10 ವರ್ಷಗಳ ಹಿನ್ನೆಲೆ ಹೊಂದಿರುವ ದಲಿತ ಸೇವಾ ಸಮಿತಿಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ತಾಲೂಕು ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡ್ ಅವರು ನನಗೆ ವಿಪರೀತ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಇತ್ತೀಚೆಗೆ ನಡೆದ ತಾಲೂಕು ಸಮಿತಿ ಸಭೆಯಲ್ಲಿ ನನ್ನ ಜೊತೆ ಇತರ ಪದಾಧಿಕಾರಿಗಳೂ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ. ಅವರೆಲ್ಲರ ಅಭಿಪ್ರಾಯ ಪಡೆದು ಹೊಸ ಸಂಘಟನೆ ಹುಟ್ಟು ಹಾಕುವ ನಿರ್ಧಾರ ಕೈಗೊಂಡಿದ್ದೇನೆ. ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಮಟ್ಟದಲ್ಲಿ ಬೆಳೆಯಲಿದೆ. ಜೂನ್ 4ರಂದು ಪುತ್ತೂರಿನ ಶಿವರಾಮ ಕಾರಂತ ಶಾಲೆಯಲ್ಲಿ ಸಂಘಟನೆಯ ಉದ್ಘಾಟನೆ ನಡೆಯಲಿದೆ” ಎಂದರು.

“ತಾಲೂಕು ಮಟ್ಟದಲ್ಲಿ ನಾನು ಸಾಕಷ್ಟು ಹೋರಾಟ ಸಂಘಟಿಸಿದ್ದೇನೆ. ನಾನು ಅಧ್ಯಕ್ಷನಾಗಿ ಬಂದಾಗ ಇಲ್ಲಿ ಕೇವಲ 13 ಸದಸ್ಯರಿದ್ದರು. ನನ್ನ ಅವಧಿಯಲ್ಲಿ ಅದು 1,600ಕ್ಕೆ ಏರಿದೆ. ನೂರಾರು ಜನರ ಅನ್ಯಾಯಕ್ಕೆ ನಾವು ಪರಿಹಾರ ಹುಡುಕಿಕೊಟ್ಟಿದ್ದೇವೆ. ಹೀಗಿರುವಾಗ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರತಿಯೊಂದಕ್ಕೂ ಜಿಲ್ಲಾಧ್ಯಕ್ಷರು ತಮ್ಮ ಅನುಮತಿ ಪಡೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. ತಾಲೂಕು ಸಮಿತಿಯು ನನ್ನ ನೇತೃತ್ವದಲ್ಲಿ ಬೆಳೆಯುತ್ತಿರುವುದನ್ನು ಅವರು ಸಹಿಸಿಕೊಳ್ಳುತ್ತಿರಲಿಲ್ಲ. ಜನ ಎಲ್ಲಿ ನನ್ನನ್ನು ಬೆಳೆಸುತ್ತಾರೋ ಎಂಬ ಆತಂಕದಲ್ಲಿ ನನ್ನನ್ನು ನಿಯಂತ್ರಿಸಲು ಯತ್ನಿಸುತ್ತಲೇ ಬಂದಿದ್ದಾರೆ. ಇದರಿಂದ ಬೇಸತ್ತು ನಾನು ರಾಜೀನಾಮೆ ನೀಡಿದ್ದೇನೆ” ಎಂದು ತಿಳಿಸಿದರು.

“ನನ್ನ ವಿರುದ್ಧ ಜಿಲ್ಲಾಧ್ಯಕ್ಷರು ಬೇರೆಬೇರೆ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಂಥ ಆರೋಪಗಳಿಗೆ ದಾಖಲೆ ಇದ್ದರೆ ತೋರಿಸಲಿ. ಅನಗತ್ಯ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಅಂಥ ಆರೋಪ ನಾನು ಕೂಡ ಅವರ ವಿರುದ್ಧ ಮಾಡಬಹುದು. ಆದರೆ ನಾನು ಹಾಗೆ ಮಾಡುವುದಿಲ್ಲ. ನಮ್ಮ ಹೊಸ ಸಂಘಟನೆಯು ನೋಂದಾಯಿಸಿಕೊಂಡು ದಲಿತರು ಸೇರಿದಂತೆ ಸಮಾಜದಲ್ಲಿ ಯಾರೆಲ್ಲ ತುಳಿತಕ್ಕೆ ಒಳಗಾಗುತ್ತಾರೋ ಅವರೆಲ್ಲರ ವಿರುದ್ಧ ಹೋರಾಟ, ಆಂದೋಲನ ನಡೆಸಲಿದ್ದೇವೆ” ಎಂದರು.

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ-ಕರ್ನಾಟಕ ಎಂಬ ಹೆಸರಿನಲ್ಲಿ ಹೊಸ ಸಂಘಟನೆ ಹುಟ್ಟು ಹಾಕಿರುವುದಾಗಿ ಪ್ರಕಟಿಸಿರುವ ಗಿರಿಧರ್ ನಾಯ್ಕ್ ಅವರು, “ಪ್ರಸ್ತುತ ನಾನು ಅದರ ತಾಲೂಕು ಅಧ್ಯಕ್ಷನಾಗಿದ್ದು, ಕೆಲವೇ ದಿನಗಳಲ್ಲಿ ಸಂಘಟನೆಯನ್ನು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸಂಘಟಿಸಲಾಗುವುದು. ಆಗ ಹೊಸ ಪದಾಧಿಕಾರಿಗಳನ್ನು ನಿರ್ಧರಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಈ ವಿದ್ಯಮಾನಕ್ಕೆ ಪ್ರತಿಕ್ರಿಯೆ ನೀಡಿರುವ ದ ಕ ಜಿಲ್ಲಾ ದಲಿತ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡ್ ಅವರು, “ಗಿರಿಧರ್ ನಾಯ್ಕ್ ಒಬ್ಬರೇ ರಾಜೀನಾಮೆ ನೀಡಿದ್ದಾರೆ. ಪುತ್ತೂರು ತಾಲೂಕು ಸಮಿತಿಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಮಹಿಳಾ ಘಟಕದ ಅಧ್ಯಕ್ಷರೂ ಸೇರಿದಂತೆ ಪ್ರಮುಖ ಪದಾಧಿಕಾರಿಗಳೆಲ್ಲ ಸಂಘಟನೆಯಲ್ಲೇ ಇದ್ದಾರೆ. ಗಿರಿಧರ್ ನಾಯ್ಕ್ ರಾಜೀನಾಮೆಯಿಂದ ಸಂಘಟನೆಗೆ ಏನೂ ಸಮಸ್ಯೆ ಆಗುವುದಿಲ್ಲ. ತಾಲೂಕು ಸಮಿತಿಯನ್ನು ಸದ್ಯದಲ್ಲೆ ಪರಿಷ್ಕರಿಸಲಾಗುವುದು” ಎಂದು ತಿಳಿಸಿದ್ದಾರೆ.

“ಹತ್ತು ವರ್ಷಗಳ ಇತಿಹಾಸ ಹೊಂದಿರುವ ದ ಕ ಜಿಲ್ಲಾ ದಲಿತ ಸೇವಾ ಸಮಿತಿಯು ಒಂದು ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಾ ಬಂದಿದೆ. ಅದರ ನಿಯಮವನ್ನು ಮೀರಿದಾಗ ಜಿಲ್ಲಾಧ್ಯಕ್ಷನಾಗಿ ನಾನು ಸೂಕ್ತ ಸೂಚನೆ ನೀಡುವುದು ಅನಿವಾರ್ಯ. ತಾಲೂಕು ಸಮಿತಿಯು ಕಾರ್ಯಕ್ರಮಗಳನ್ನು ನಡೆಸುವಾಗ ಜಿಲ್ಲಾ ಸಮಿತಿಯ ಅನುಮತಿ ಪಡೆಯವುದು ನಿಯಮ. ಹಾಗೆ ಮಾಡದೇ ಇದ್ದಾಗ ಗಿರಿಧರ್ ನಾಯ್ಕ್ ಅವರಿಗೆ ತಿಳಿಹೇಳಿದ್ದೇನೆ. ಸಂಘಟನೆಯ ನಿಯಮಗಳ ಉಲ್ಲಂಘನೆ ಪದೇಪದೇ ಆದಾಗ ತಾಲೂಕು ಸಮಿತಿಯನ್ನು ಪರಿಷ್ಕರಿಸಲು ಜಿಲ್ಲಾ ಸಮಿತಿ ನಿರ್ಧರಿಸಿತ್ತು. ಅದರಂತೆ ಗಿರಿಧರ್ ನಾಯ್ಕ್ ಅವರು ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಏನೂ ವಿಶೇಷವಿಲ್ಲ” ಎಂದು ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.