ಅತ್ಯಂತ ಎತ್ತರದ ರಾಷ್ಟ್ರಧ್ವಜ ಈಗ ಹಾರುತ್ತಿಲ್ಲ ; ಕಂಟಕಗಳು ಹಲವು

ಅಮೃತಸರ್ : ಭಾರತದ ಅತ್ಯಂತ ಎತ್ತರದ ಹಾಗೂ ಅತ್ಯಂತ ದೊಡ್ಡ ರಾಷ್ಟ್ರಧ್ವಜವನ್ನು ಕಳೆದ ತಿಂಗಳು ಪಾಕಿಸ್ತಾನ ಗಡಿಗೆ ತೀರಾ ಹತ್ತಿರದಲ್ಲಿ ಅಮೃತಸರದಲ್ಲಿ ಹಾರಿಸಲಾಗಿದ್ದರೂ, ಸದ್ಯ ಈ ರಾಷ್ಟ್ರಧ್ವಜ ಅಲ್ಲಿ ಹಾರುತ್ತಿಲ್ಲ. ಈ ನೂರು ಕೇಜಿಗೂ ಅಧಿಕ ಭಾರದ ರಾಷ್ಟ್ರಧ್ವಜವನ್ನು ಅಷ್ಟೊಂದು ಎತ್ತರದಲ್ಲಿ ಹಾರಿಸುವ ಕಾರ್ಯ ಸುಲಭಸಾಧ್ಯವಲ್ಲ ಹಾಗೂ ಈ ರಾಷ್ಟ್ರಧ್ವಜದ ನಿರ್ವಹಣೆ ಸಾಧ್ಯವಾಗುತ್ತಿಲ್ಲವೆಂದು ಹೇಳಲಾಗಿದೆ.

ಈ ರಾಷ್ಟ್ರಧ್ವಜವನ್ನು ಹಾರಿಸಿದ ಪ್ರಥಮ ಐದು ವಾರಗಳಲ್ಲಿ ಅದು ಕನಿಷ್ಠ ಆರು ಬಾರಿ ಅಷ್ಟೊಂದು ಎತ್ತರದಲ್ಲಿ ಬೀಸುವ ಬಲವಾದ ಗಾಳಿಯಿಂದಾಗಿ ಹಾನಿಗೊಡಿತ್ತು. ಪ್ರತಿ ಬಾರಿ  ಹಾನಿಗೊಂಡಾಗಲೂ  ಈ 36 ಮೀಟರ್ ಉದ್ದದ ಹಾಗೂ 24 ಮೀಟರ್ ಅಗಲದ ರಾಷ್ಟ್ರಧ್ವಜವನ್ನು ಬದಲಾಯಿಸುವುದು ಹರಸಾಹಸದ ಕೆಲಸವಾಗಿತ್ತು.

ಇದೀಗ ಅಮೃತಸರ ಅಭಿವೃದ್ಧಿ ಟ್ರಸ್ಟ್ ಅಧಿಕಾರಿಗಳು ಈ ರಾಷ್ಟ್ರಧ್ವಜದ ನಿರ್ವಹಣಾ ವೆಚ್ಚ ನಿರ್ವಹಿಸಲು ವಂತಿಗೆ ಸ್ವೀಕರಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಈ ಧ್ವಜ ಹಾರುತ್ತಿದ್ದಾಗ ಗಡಿಯಿಂದಾಚೆಗೆ 20 ಕಿ ಮೀ ದೂರದಲ್ಲಿರುವ ಲಾಹೋರ್ ನಗರದಿಂದಲೂ ಕಾಣಿಸುತ್ತಿತ್ತು.

ಸದ್ಯ  ಈ ಧ್ವಜದ  ಗಾತ್ರವನ್ನು ತಗ್ಗಿಸಲು ನಿರ್ಧರಿಸಲಾಗಿದೆಯೆನ್ನಲಾಗಿದ್ದು 120 ಅಡಿ ಎತ್ತರದ ಬದಲು 72 ಅಡಿ ಎತ್ತರದ ರಾಷ್ಟ್ರಧ್ವಜ ಉಪಯೋಗಿಸಲು ನಿರ್ಧರಿಸಲಾಗಿದೆ.