ತುಂಬೆ ಡ್ಯಾಂ ಮುಳುಗು ಪ್ರದೇಶಗಳ ಸಂತ್ರಸ್ತ ರೈತರಿಗೆ ಪರಿಹಾರ ಬೀಡಲು ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ

ವಿಧಾನಸೌಧದಲ್ಲಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ತುಂಬೆ ವೆಂಟೆಡ್ ಡ್ಯಾಂ ಮುಳುಗು ಪ್ರದೇಶಗಳ ಸಂತ್ರಸ್ತ ರೈತರಿಗೆ ನ್ಯಾಯೋಚಿತ ಪರಿಹಾರ ನೀಡುವ ಬಗ್ಗೆ ರೈತರ ಪರವಾಗಿ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ನೇತೃತ್ವದ ನಿಯೋಗ ಇತ್ತೀಚೆಗೆ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಚರ್ಚಿಸಿತು.

ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಈ ಸಭೆಯಲ್ಲಿ ಈ ಬಾರಿ ತುಂಬೆಯ ನೂತನ ಡ್ಯಾಂನಲ್ಲಿ 4.5 ಮೀಟರ್ ನೀರು ಸಂಗ್ರಹಿಸಲಾಗಿದೆ. ಈ ಸಂಬಂಧ ಮುಳುಗಡೆಗೊಂಡ ಜಮೀನಿನ ಸಂತ್ರಸ್ತರಿಗೆ ಈ ವರ್ಷವೇ ನ್ಯಾಯೋಚಿತ ಪರಿಹಾರ ನೀಡಲಾಗುವುದು ಹಾಗೂ ಮುಂದಿನ ವರ್ಷ 5 ಮೀಟರ್ ನೀರು ಸಂಗ್ರಹಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧವೂ ಸಂತ್ರಸ್ತ ರೈತರಿಗೆ ಅದೇ ವರ್ಷ ಶಾಶ್ವತ ಪರಿಹಾರ ನೀಡುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ.

ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ ಸಂಗ್ರಹಿಸುವ ನೀರಿನಿಂದ ಒಟ್ಟು 488 ಎಕ್ರೆ ಜಮೀನು ಮುಳುಗಡೆಯಾಗುವ ಬಗ್ಗೆ ಈಗಾಗಲೇ ಸರ್ವೆ ನಡೆಸಲಾಗಿದ್ದು, ಈ ಜಮೀನುಗಳ ಸಂತ್ರಸ್ತರಿಗೆ ಒಟ್ಟು ಪರಿಹಾರ ಮೊತ್ತ 125 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಪರಿಹಾರ ಮೊತ್ತವನ್ನು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಹಣಕಾಸು ಇಲಾಖೆ ಜಂಟಿಯಾಗಿ ಠೇವಣಿ ಇಟ್ಟು ವಿತರಿಸುವುದು ಎಂಬ ತೀರ್ಮಾನಕ್ಕೂ ಸಭೆಯಲ್ಲಿ ಬರಲಾಗಿದೆ.