ಶಾರ್ಟ್ ಸಕ್ರ್ಯೂಟಿಂದ ಟೈಲರ್ ಅಂಗಡಿಗೆ ಬೆಂಕಿ

ಸುಟ್ಟು ಕರಕಲಾದ ಅಂಗಡಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಸರಕು ಸಾಗಿಸುವ ವಾಹನವೊಂದು ವಿದ್ಯುತ್ ಕಂಬ ಸ್ಪರ್ಷಿಸಿದಾಗ ಎರಡೂ ವೈರುಗಳು ತಾಗಿದ ಪರಿಣಾಮ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಸಮೀಪದ ಬಟ್ಟೆ ಅಂಗಡಿ ಬೆಂಕಿಗಾಹುತಿಯಾದ ಘಟನೆ ಗುರುವಾರ ಮಧ್ಯಾಹ್ನ ಕುಂದಾಪುರದ ವಿನಾಯಕ ಸಮೀಪ ನಡೆದಿದೆ.

ರೇವತಿ ಪೂಜಾರಿ ಎಂಬವರಿಗೆ ಸೇರಿದ ಸೃಷ್ಟಿ ಲೇಡೀಸ್ ಟೈಲರ್ ಮತ್ತು ಹೊಲಿಗೆ ತರಬೇತಿ ಕೇಂದ್ರ ಬೆಂಕಿಗಾಹುತಿಯಾದ ಅಂಗಡಿ. ವಿ ಆರ್ ಎಲ್ ಲಾಜಿಸ್ಟಿಕ್ ಸಂಸ್ಥೆಗೆ ಸಂಬಂಧಿಸಿದ ಗೂಡ್ಸ್ ಲಾರಿ ಕುಂದಾಪುರದ ವಿನಾಯಕ ಕೋಡಿ ರಸ್ತೆಯಲ್ಲಿರುವ ಗೋಡೌನಿಗೆ ತೆರಳುತ್ತಿದ್ದ ಸಂದರ್ಭ ವಿದ್ಯುತ್ ಕಂಬಕ್ಕೆ ತಾಗಿದ್ದು, ತಂತಿಯನ್ನು ಸ್ಪರ್ಷಿಸಿದೆ ಎನ್ನಲಾಗಿದೆ. ಈ ಸಂದರ್ಭ ವಿದ್ಯುತ್ ಕಂಬದಲ್ಲಿಯೇ ಶಾರ್ಟ್ ಸಕ್ರ್ಯೂಟ್ ನಡೆದಿದೆ. ಸಮೀಪದಲ್ಲಿಯೇ ಇದ್ದ ಸೃಷ್ಟಿ ಲೇಡೀಸ್ ಟೈಲರ್ ಮತ್ತು ಹೊಲಿಗೆ ತರಬೇತಿ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಆಗಿದ್ದ ಪರಿಣಾಮ ಬೆಂಕಿ ಹತ್ತಿಕೊಂಡಿದೆ.

ಮದುವೆ ಸೀಸನ್ ಆಗಿದ್ದರಿಂದ ಹಲವು ಮದುವೆ ಮನೆಯವರು ಹೊಲಿಗೆಗಾಗಿ ಬಟ್ಟೆಗಳನ್ನು ಕೊಟ್ಟಿದ್ದರು ಎನ್ನಲಾಗಿದ್ದು, ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟುಹೋಗಿವೆ ಎನ್ನಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.