ಅಸಮರ್ಪಕ ನಿರ್ವಹಣೆಯಿಂದ ಟ್ಯಾಗೋರ್ ಮೂರ್ತಿ ಶಿಥಿಲ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ಕಾಜುಬಾಗದ ರವೀಂದ್ರನಾಥ್ ಕಡಲತೀರದಲ್ಲಿರುವ ವಿಶ್ವ ಕವಿ ರವೀಂದ್ರನಾಥ ಟ್ಯಾಗೋರರ ಹಳೆಯ ಮೂರ್ತಿ ಸಮರ್ಪಕ ನಿರ್ವಹಣೆ ಇಲ್ಲದೇ ಶಿಥಿಲಗೊಳ್ಳುತ್ತಿರುವುದನ್ನು ಗಮನಿಸಿದ ಬಂಗಾಳಿ ಯುವಕರ ತಂಡ ಮೂರ್ತಿ ಸ್ವಚ್ಛಗೊಳಿಸುವ ಕಾರ್ಯ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ 50 ದಶಕಗಳ ಹಿಂದೆ ಈಶಾನ್ಯ ಭಾಗದಿಂದ ಬಂದ ಮೀಜೋರಾಂ ಮೂಲದ ಲಾಲ್ ರೊಕೊಮಾ ಪಚಾವೊ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೀಚ್ ಮೇಲೆ ಮಾರುತಿ ಹಾಗೂ ರವೀಂದ್ರನಾಥ ಟ್ಯಾಗೋರ್ ಮೂರ್ತಿಯನ್ನು ನಿರ್ಮಿಸಿದ್ದರು. ಹನುಮಾನ್ ಭಕ್ತನಾಗಿದ್ದು ರವೀಂದ್ರನಾಥ ಟ್ಯಾಗೋರ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಇಲ್ಲಿ ಮೂರ್ತಿಗಳನ್ನು ನಿರ್ಮಿಸುವುದರ ಮೂಲಕ ಗೌರವ ಸಲ್ಲಿಸಿದ್ದರು. ಅವರ ವರ್ಗಾವಣೆ ನಂತರ ಕೆಲವು ವರ್ಷಗಳ ತನಕ ಎರಡೂ ಮೂರ್ತಿಗಳಿಗೆ ಜಿಲ್ಲಾ ಪೆÇಲೀಸ್ ಇಲಾಖೆ ಗೌರವ ನೀಡುತ್ತ ಬಂದಿತ್ತು. ಅದರ ಬಳಿಕ ಪೆÇಲೀಸ್ ಇಲಾಖೆಯು ಈ ಎರಡೂ ಮೂರ್ತಿಗಳನ್ನು ನಿರ್ಲಕ್ಷಿಸಿತು. ಆದರೆ ಆರ್ಟಿಓ ಎದುರಿನ ಹನುಮಾನ್ ಮೂರ್ತಿ ಮಾತ್ರ ಭಕ್ತರು ಹಾಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಆದರೆ ಸ್ವತಃ ಎಸ್ಪಿ ಬಂಗಲೆ ಹಿಂಬದಿಯ ಬೀಚಿನ ಇಕ್ಕಟ್ಟಿನಲ್ಲಿರುವ ಪ್ರದೇಶದಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರ ಮೂರ್ತಿ ಮಾತ್ರ ನೆನೆಗುದಿಗೆ ಬಿದ್ದಿದೆ. ಸ್ಥಳೀಯ ಮೀನುಗಾರ ಯುವಕರು ಸಂಘ ರಚಿಸಿ ಕೆಲ ವರ್ಷ ಈ ಮೂರ್ತಿಗೆ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನದಂದು ಬಣ್ಣ ಬಳಿದು ಗೌರವ ಸಮರ್ಪಿಸುತ್ತಿದ್ದರು. ಈಗ ಬೀಚ್ ಮೇಲಿನಿಂದ ಮೀನುಗಾರರನ್ನು ಒಕ್ಕಲೆಬ್ಬಿಸಿದ ನಂತರ ಅವರ ಆ ಕಾರ್ಯವೂ ನಿಂತಿದೆ. ಹಾಗಾಗಿ ಮೂರ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.