“ನಟರ ಸಿನಿಮಾದಷ್ಟೇ ಬಿಗ್ ಓಪನಿಂಗ್ ಇಲ್ಲದಿದ್ದರೆ ಸಂಭಾವನೆ ಸಮಾನತೆ ಕಷ್ಟ”

`ಪಿಂಕ್’ ಚಿತ್ರದ ನಂತರ ತಾಪ್ಸೀ ಪನ್ನು ಚಿತ್ರರಂಗದಲ್ಲಿ ಮತ್ತಷ್ಟು ಗಟ್ಟಿಯಾಗಿದ್ದಾಳೆ. ಆಕೆ ನಟನೆಯ `ನಾಮ್ ಶಬಾನಾ’ ಚಿತ್ರಕ್ಕೂ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಸಂಭಾವನೆ ವಿಷಯದಲ್ಲಿ ಆಕೆ ಇನ್ನೂ ಸ್ಟಾರ್ ನಟರಷ್ಟೇ ತನಗೂ ನೀಡಬೇಕು ಎನ್ನುವ ಬೇಡಿಕೆ ಇಟ್ಟಿಲ್ಲ.

ಈಗ ಹೆಚ್ಚಿನ ನಟಿಯರು ತಮಗೆ ಸ್ಟಾರ್ ನಟರಷ್ಟೇ ಸಂಭಾವನೆ ಸಿಗಬೇಕು ಎಂದು ಹುಯ್ಲೆಬ್ಬಿಸುತ್ತಿದ್ದಾರೆ. ಆದರೆ ತಾಪ್ಸಿ ಹೇಳುವುದೇ ಬೇರೆ “ಸ್ಟಾರ್ ನಟರು ನಟಿಸಿದ ಸಿನಿಮಾಗೆ ಬಾಕ್ಸಾಫೀಸಿನಲ್ಲಿ ಸಿಗುವಷ್ಟು ದೊಡ್ಡ ಓಪನಿಂಗ್ ನಟಿಯರು ಪ್ರಮುಖ ಪಾತ್ರಧಾರಿಗಳಾದ ಚಿತ್ರಕ್ಕೆ ಸಿಗುತ್ತಿಲ್ಲ. ಸಿನಿಮಾ ಎಷ್ಟೇ ಚೆನ್ನಾಗಿದ್ದರೂ ಪ್ರೇಕ್ಷಕರು ನಟಿಯರೇ ಪ್ರಧಾನರಾಗಿರುವ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಮೊದಲ ದಿನವೇ ಚಿತ್ರಮಂದಿರಕ್ಕೆ ಹೋಗುವವರ ಸಂಖ್ಯೆ ಕಡಿಮೆ. ಅದು ಮೊದಲು ಬದಲಾಗಬೇಕು. ಬಂಪರ್ ಓಪನಿಂಗ್ ಸಿಗದ ಹೊರತು ನಿರ್ಮಾಪಕರಿಂದ ಸ್ಟಾರ್ ನಟರಷ್ಟೇ ಡಿಮಾಂಡ್ ಮಾಡುವುದು ಸರಿಯಲ್ಲ” ಎನ್ನುತ್ತಾಳೆ ಈ `ಪಿಂಕ್’ ನಟಿ. “ಮಹಿಳಾಪ್ರಧಾನ ಚಿತ್ರಗಳು `ಕ್ವೀನ್’, `ಮೇರಿ ಕಾಮ್’ನಂತಹ ಚಿತ್ರಗಳು ವರ್ಷಕ್ಕೆ ಒಂದೋ ಎರಡೋ ಬರುತ್ತವೆ. ಕಳೆದ ವರ್ಷ ಬಂದ ಮಹಿಳಾಪ್ರಧಾನ ಚಿತ್ರಗಳಲ್ಲಿ ನನ್ನ ಚಿತ್ರವೇ ಹೆಚ್ಚು ಗಳಿಸಿದ್ದು. ಆದರೆ ಅದಕ್ಕಿಂತ ದೊಡ್ಡ ಓಪನಿಂಗ್ ಪಡೆದ ಅದೆಷ್ಟೋ ನಟರು ಪ್ರಧಾನವಾಗಿರುವ ಚಿತ್ರಗಳು ಪಡೆದಿವೆ” ಎನ್ನುತ್ತಾಳೆ ತಾಪ್ಸೀ.

ತಾಪ್ಸೀ ಈಗ ವರುಣ್ ಧಾವನ್ ಜೊತೆ `ಜುಡ್ವಾ-2′ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅದಲ್ಲದೇ ಅನುರಾಗ್ ಕಶ್ಯಪ್ ನಿರ್ದೇಶನದ ಇನ್ನೊಂದು ಚಿತ್ರಕ್ಕೂ ಸಹಿ ಹಾಕಿದ್ದಾಳೆ ಎನ್ನಲಾಗಿದೆ.