ಪಿಲಿಕುಳ ನಿಸರ್ಗಧಾಮ ಪ್ರವೇಶಕ್ಕೆ ಸ್ವೈಪ್ ಕಾರ್ಡ್

pilikula

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಪಿಲಿಕುಳ ನಿಸರ್ಗಧಾಮದ ಸಂದರ್ಶಕರು ಇದೀಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡುಗಳ ಮೂಲಕ ಹಣ ಪಾವತಿಸಿ ನಿಸರ್ಗಧಾಮದ ಸುಂದರ ವೈವಿಧ್ಯತೆಗಳನ್ನು ವೀಕ್ಷಿಸಬಹುದು. ಜನವರಿ 20ರಿಂದ ಈ ಸೌಲಭ್ಯವನ್ನು ಅಸ್ಥಿತ್ವಕ್ಕೆ ತರಲಾಗಿದೆ” ಎಂದು ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ.

“ಮುಂದಿನ ಹಂತದಲ್ಲಿ ನಿಸರ್ಗಧಾಮ ಸಂಪೂರ್ಣ ನಗದುರಹಿತ ವಹಿವಾಟು ವ್ಯವಸ್ಥೆಯನ್ನು ಹೊಂದಲಿದೆ. ಮುಂಬರುವ ದಿನಗಳಲ್ಲಿ ಡಿಜಿಟಲ್ ವ್ಯಾಲೆಟ್ಸ್ ಮತ್ತು ಯುನಿವರ್ಸಲ್ ಪೇಮೆಂಟ್ ಇಂಟರಫೇಸ್ ವ್ಯವಸ್ಥೆಯನ್ನು ಕೂಡ ನಿಸರ್ಗಧಾಮದಲ್ಲಿ ಜಾರಿಗೊಳಿಸಲಾಗುವುದು, ಅಂತಿಮವಾಗಿ ನಿಸರ್ಗಧಾಮದಲ್ಲಿ ನಗದು ವ್ಯವಹಾರವನ್ನು ನಿಲ್ಲಿಸಲಾಗುತ್ತದೆ” ಎಂದವರು ವಿವರಿಸಿದ್ದಾರೆ.

“ಉದ್ಯಾನÀದ ಪ್ರವೇಶ ಶುಲ್ಕ ಹಿರಿಯರಿಗೆ ರೂ 50 ಮತ್ತು 3ರಿಂದ 10 ವಯೋಮಿತಿಯ ಮಕ್ಕಳಿಗೆ ರೂ 20ರಂತೆ ನಗದಿಪಡಿಸಲಾಗಿದೆ, ಮೂರಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ಪ್ರವೇಶ ಶುಲ್ಕವಿಲ್ಲ. ಶಾಲಾ ಪ್ರವಾಸದ ಮಕ್ಕಳಿಗೆ ತಲಾ ರೂ 15ರಂತೆ ಶುಲ್ಕ ನಿಗದಿಪಡಿಸಲಾಗಿದೆ. ಶೀಘ್ರದಲ್ಲಿಯೇ ಉದ್ಯಾನದ ಪ್ರವೇಶ ಭಾಗದಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗುವುದು” ಎಂದು ಭಂಡಾರಿ ತಿಳಿಸಿದ್ದಾರೆ.

“ಇದೇ ವೇಳೆ ಈ ತಿಂಗಳ ಅಂತ್ಯಕ್ಕೆ ಪಿಲಿಕುಳ ಜೈವಿಕ ಉದ್ಯಾನವನ್ನು ಹೊಸ ಅತಿಥಿಯೊಂದು ಆಕರ್ಷಿಸಲಿದೆ. ಉದ್ಯಾನವನಕ್ಕೆ ಮೂರು ನೀರ್ಗುದುರೆಗಳು ಪ್ರವೇಶಿಸಲಿವೆ. ಎರಡು ಹೆಣ್ಣು ಮತ್ತು ಒಂದು ಗಂಡು ನೀರ್ಗುದುರೆಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಇಲ್ಲಿಗೆ ತರುವ ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಫೆಬ್ರವರಿ 15ರೊಳಗೆ ಉದ್ಯಾನಕ್ಕೆ ನೀರ್ಗುದುರೆಗಳು ಆಗಮಿಸಲಿವೆ” ಎಂದು ಭಂಡಾರಿ ತಿಳಿಸಿದ್ದಾರೆ.