ಕಾರ್ಕಳ ಪುರಸಭೆಯಲ್ಲಿ ಆಣೆ ಪ್ರಮಾಣ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಉಡುಪಿ ಜಿಲ್ಲಾಧಿಕಾರಿ ಮತ್ತು ಯೋಜನಾ ನಿರ್ದೇಶಕರ ಅಸಮರ್ಪಕ ಕಾರ್ಯನಿರ್ವಹಣೆ ಕಾರ್ಕಳ ಪುರಸಭೆಯ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಸದಸ್ಯ ಮೊಹಮ್ಮದ್ ಶರೀಫ್ ಅಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, “ಹವಾಲ್ದಾರಬೆಟ್ಟು, ಕಾಬೆಟ್ಟು, ಶಿವತಿಕೆರೆ ಬಳಿಯಿರುವ ದಲಿತ ಕುಟುಂಬಗಳು ಒಳಚರಂಡಿ ವ್ಯವಸ್ಥೆಯಿಂದ ನೊಂದಿದ್ದರೆ, ಅವರ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ಸೂಚಿಸುವ ಕೆಲಸ ಕೂಡಾ ಈ ಮೇಲಧಿಕಾರಿಗಳು ಮಾಡಿಲ್ಲ. ಹಾಗಾದರೆ ದಲಿತರಿಗೆ ಬದುಕುವ ಹಕ್ಕಿಲ್ಲವೇ ?” ಎಂದು ಪ್ರಶ್ನಿಸಿದರು. ಸದಸ್ಯರಾದ ನಳಿನಿ ಆಚಾರ್ಯ, ರೆಹಮತ್ ಮತ್ತು ಶಾಂತಿ ಶೆಟ್ಟಿ ಮಾತನಾಡಿ, ಅವರ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಿ ಎಂದು ಆಗ್ರಹಿಸಿದರು.

ಬಂಗ್ಲೆಗುಡ್ಡೆಯಲ್ಲಿ ನೀರು ಪೂರೈಕೆ ಮಾಡುವ ಸಿಬ್ಬಂದಿ ಪಾನಮತ್ತನಾಗಿ ಕರ್ತವ್ಯ ಲೋಪ ಎಸಗುತ್ತಿದ್ದಾನೆ. ಆತನ ವಿರುದ್ದ ಕ್ರಮ ಯಾಕೆ ಕೈಗೊಂಡಿಲ್ಲ ? ಎಂದು ಮೊಹಮ್ಮದ್ ಶರೀಫ್ ದೂರಿದರು. ಈ ಬಗ್ಗೆ ಸೂಕ್ತ ಉತ್ತರ ಬೇಕು ಎಂದು ಯೋಗೀಶ್ ದೇವಾಡಿಗ ಮತ್ತು ಎಸ್ ಪಾಶ್ರ್ವನಾಥ ವರ್ಮ ಒತ್ತಾಯಿಸಿದರು. ಅಶ್ಪಕ್ ಅಹ್ಮದ್ ಮಾತನಾಡಿ, ಆತನನ್ನು ನನ್ನ ವಾರ್ಡಿಗೆ ವರ್ಗಾವಣೆ ಮಾಡಿ. ನಾನು ಕೆಲಸ ಮಾಡಿಸುತ್ತೇನೆ ಎಂದರು.

ಸಭೆಯ ನಡಾವಳಿ ವಿರುದ್ಧ ಅಸಮಾಧಾನ ಶಿಸ್ತು, ಸಂಯಮವಿಲ್ಲದೆ ಸಂತೆ ಮಾರುಕಟ್ಟೆಯಾಗಿರುವ ಸಾಮಾನ್ಯ ಸಭೆಯ ನಡತೆಯ ಬಗ್ಗೆ ಸುಭಿತ್ ಎನ್ ಆರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದೇ ವೇಳೆ ಮಾತನಾಡಿದ ಅಶ್ಪಕ್ ಅಹ್ಮದ್ ಸಭೆಯ ಅಜೆಂಡಾಕ್ಕೆ ಹೋಗದೆ ವಿನಾಕಾರಣ ಸಮಯ ಕಳೆಯುವುದು ಸರಿಯಲ್ಲ. ಇದರಿಂದ ನಮ್ಮ ಮರ್ಯಾದೆ ಹರಾಜಾಗುತ್ತಿದೆ ಎಂದರು.

ಆಣೆ ಪ್ರಮಾಣ ಕಳೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಪ್ರಕಾಶ್ ರಾವ್ ನೀರು ಪೂರೈಕೆ ಟೆಂಡರಿನಲ್ಲಿ ಲಂಚ ಕೇಳಿದ್ದಾರೆ ಎಂದು ದಿನಗೂಲಿ ನೌಕರ ಜಯಪ್ರಕಾಶ್ ಎಂಬವರು ಆರೋಪಿಸಿದ್ದು, ಇದರಿಂದ ಸಿಟ್ಟಿಗೆದ್ದ ಪ್ರಕಾಶ್ ರಾವ್ ಬುಧವಾರ ಸಭೆ ಆರಂಭವಾಗುತ್ತಿದ್ದಂತೆಯೇ “ಕಳೆದ ಸಭೆಯಲ್ಲಿ ಒಬ್ಬ ಸಾಮಾನ್ಯ ಸಿಬ್ಬಂದಿ ತನ್ನ ವಿರುದ್ಧ ಲಂಚದ ಗಂಭೀರ ಆರೋಪ ಮಾಡಿದ್ದು, ತಾನು ಯಾರಲ್ಲಿಯೂ ಲಂಚಕ್ಕೆ ಬೇಡಿಕೆಯಿಟ್ಟಿಲ್ಲ, ಆರೋಪ ಮಾಡುವವರು ಕಾರ್ಕಳ ಮಾರಿಗುಡಿಗೆ ಬಂದು ತೆಂಗಿನ ಕಾಯಿ ಮುಟ್ಟಿ ಪ್ರಮಾಣ ಮಾಡಲಿ” ಎಂದು ಸಭೆಗೆ ತೆಂಗಿನಕಾಯಿ ಪ್ರದರ್ಶಿಸಿ ಬಳಿಕ ಮಾರಿಗುಡಿಗೆ ಅರ್ಪಿಸಿದ ಘಟನೆ ನಡೆಯಿತು.