ಸಂಸ್ಕೃತಕ್ಕೆ ಸರಕಾರದಿಂದ ಅವಗಣನೆ : ಸ್ವರ್ಣವಲ್ಲಿ ಶ್ರೀ ಖೇದ

ರಾಷ್ಟ್ರಮಟ್ಟದ ವೇದ, ಸಂಸ್ಕೃತ ಸಮ್ಮೇಳನ ಉದ್ಘಾಟನೆ

ನಮ್ಮ ಪ್ರತಿನಿಧಿ ವರದಿ       

ಶಿರಸಿ : “ಸಂಸ್ಕೃತ ಕುರಿತಾಗಿ ಸರ್ಕಾರದ ಅಲಕ್ಷ ಧೋರಣೆ ಹೆಚ್ಚಿದೆ. ವಿದ್ಯಾಲಯಗಳಲ್ಲಿ ಹಲವು ವರ್ಷಗಳಿಂದ ಸಂಸ್ಕೃತ ಶಿಕ್ಷಕರ ನಿಯುಕ್ತಿ ಆಗುತ್ತಿಲ್ಲ. ಕಳೆದ 20 ವರ್ಷಗಳಿಂದ ಮಠದಲ್ಲಿಯೇ ಸಂಸ್ಕೃತ ಶಿಕ್ಷಕರಿಲ್ಲ. ಅವರ ನೇಮಕ ಪ್ರಕ್ರಿಯೆಗೆ ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಪದವಿ, ಪದವಿಪೂರ್ವ ವಿದ್ಯಾಲಯಗಳಲ್ಲಿ ಈ ಸಮಸ್ಯೆ ಅತಿಯಾಗಿದೆ. ಹೀಗಾಗಿ ಸರ್ಕಾರವು ಸಂಸ್ಕೃತದೆಡೆಗಿನ ಔದಾಸೀನ್ಯ ತೊರೆದು ಶಿಕ್ಷಕರ ನಿಯುಕ್ತಿ ಮಾಡಿದರೆ ಸಂಸ್ಕೃತ ಬೆಳೆಯಲು ಸಹಕಾರಿ” ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ಶನಿವಾರ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ಪೀಠಾರೋಹಣದ ರಜತ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರಮಟ್ಟದ ವೇದ-ಸಂಸ್ಕೃತ ಸಮ್ಮೇಳನ ಹಾಗೂ ಸಂಸ್ಕೃತ ಸಂಭಾಷಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಮಾತನಾಡುತ್ತಾ, “ಸಂಸ್ಕೃತದ ಬಗ್ಗೆ ಜನಾದರ ಹೆಚ್ಚಿದೆ. ಇದೇ ಸಂಸ್ಕೃತದಿಂದಾಗುವ ಪ್ರಯೋಜನವಾಗಿದೆ. ಹಾಗಾಗಿ ಸರ್ಕಾರ ಉದಾಸೀನತೆ ತೊರೆದು ಸಂಸ್ಕೃತ ಬೆಳೆಸುವಲ್ಲಿ ಶಿಕ್ಷಕರ ನಿಯುಕ್ತಿ ಮಾಡಬೇಕು. ಸುಲಭವಾಗಿ ಕಲಿಯಲು ಸಾಧ್ಯವಿರುವ ಸಂಸ್ಕೃತವನ್ನು ಎಲ್ಲರೂ ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಸಂಸ್ಕೃತದಲ್ಲಿ ನಮ್ಮ ಪ್ರಾಚೀನ ಸಂಸ್ಕೃತಿ ಅಡಗಿದೆ. ಹಾಗಾಗಿ ಸಂಸ್ಕೃತದ ಎಡೆಗಿನ ಉದಾಸೀನವನ್ನು ಸರ್ಕಾರ ತೊಡೆದು ಹಾಕಬೇಕಾಗಿದೆ” ಎಂದರು.

“ಸಂಸ್ಕೃತ ವಿದ್ವಾಂಸರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲವಾದರೆ ಸಮಾಜಕ್ಕೆ ಉಪಯುಕ್ತವಾದುದನ್ನು ಕೊಡಲು ಸಾಧ್ಯವಿಲ್ಲ. ವರ್ತಮಾನದ ವೈಜ್ಞಾನಿಕ ಕಾಲದಲ್ಲಿ ಪ್ರತಿಯೊಂದನ್ನೂ ವೈಜ್ಞಾನಿಕ ಎಂದರೆ ಮಾತ್ರ ಅದನ್ನು ನಾವು ಸ್ವೀಕರಿಸುತ್ತೇವೆ. ಅನುಭವಾತ್ಮಕವಾದ ಜ್ಞಾನವೇ ವಿಜ್ಞಾನವಾಗಿದೆ. ವೇದಶಾಸ್ತ್ರಗಳಿಗೆ ವಿಜ್ಞಾನ ಹೊರತಲ್ಲ. ಆಧುನಿಕ ವಿಜ್ಞಾನ ಮಾತ್ರ ವಿಜ್ಞಾನವಲ್ಲ. ಪ್ರಾಚೀನರು ತಮ್ಮ ದೈನಂದಿನ ಜೀವನದಲ್ಲಿ ಪ್ರಯೋಗ ಮಾಡಿ ಕೊಂಡುಕೊಂಡ ಜ್ಞಾನವೂ ಕೂಡ ವಿಜ್ಞಾನ ಎನ್ನಿಸಿಕೊಳ್ಳುತ್ತದೆ. ವೇದ ಶಾಸ್ತ್ರಗಳಲ್ಲಿರುವ ಅನುಭವಾತ್ಮಕ ಸತ್ಯವಾದ ವಿಜ್ಞಾನವನ್ನು ಹೊರಗೆ ತರುವ ಅಗತ್ಯವಿದೆ. ವೇದ ವಿಜ್ಞಾನಕ್ಕೆ ಉತ್ತೇಜನ ನೀಡುವ ಅಗತ್ಯವಿದೆ” ಎಂದು ಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಕ್ಷಿಣಾಮ್ನಾಯಾ ಶೃಂಗೇರಿ ಶಾರದಾಂಬಾ ಪೀಠದ ಆಸ್ಥಾನ ವಿದ್ವಾಂಸ ಜಿ ಮಹಾಬಲೇಶ್ವರ ಭಟ್ಟ ದಿಕ್ಸೂಚಿ ಮಾತನಾಡುತ್ತಾ, “ಸಂಸ್ಕೃತ ಭಾಷೆ ವ್ಯವಹಾರ ಪ್ರಯೋಗದಲ್ಲಿತ್ತು ಎಂಬುದಕ್ಕೆ ಮಹಾಭಾಷ್ಯಕಾರರ ಸಾಕಷ್ಟು ಪ್ರಮಾಣಗಳು ಲಭ್ಯವಿವೆ. ವೇದಗಳು ನಮಗೆ ಸಿದ್ಧ ಮತ್ತು ಸಾಧ್ಯ ವಸ್ತುಗಳ ಬಗ್ಗೆ ಹೇಳುತ್ತದೆ. ತಿಳಿದ ಹಾಗೂ ತಿಳಿಯಬೇಕಾದ ಜ್ಞಾನಗಳ ಬಗ್ಗೆ ವೇದಗಳು ಹೇಳುತ್ತದೆ. ಪರಮ ಋಷಿಗಳ ಜ್ಞಾನವೂ ವೇದಗಳಿಂದಲೇ ಬಂದುದಾಗಿದೆ” ಎಂದರು.

“ಸಂಸ್ಕೃತ ಜನಸಾಮಾನ್ಯರ ಭಾಷೆಯಲ್ಲ ಎಂದು ಆಕ್ಷೇಪ ಮಾಡಲಾಗುತ್ತಿದೆ. ಆದರೆ ಸಂಸ್ಕೃತ ಬೆಳೆದಿದ್ದು ವಾಂಙ್ಮಯ ಸಭೆಗಳಲ್ಲಲ್ಲ. ಬದಲಾಗಿ ಗ್ರಾಮೀಣ ಭಾಗ, ಕೃಷಿ ಕ್ಷೇತ್ರದಲ್ಲಾಗಿದೆ” ಎಂದರು.

ಹಿರಿಯ ಸಂಸ್ಕೃತ ವಿದ್ವಾಂಸರಾದ ಬಾಲಚಂದ್ರ ಶಾಸ್ತ್ರಿ, ನಾರಾಯಣ ಹೆಗಡೆ ಭಟ್ರಕೇರಿ, ರಾಮಚಂದ್ರ ಭಟ್ಟ ಕೋಟೆಮನೆ, ಮಹಾಭಲೇಶ್ವರ ಭಟ್ಟ ಕಿಚ್ಚೀಕೇರಿ ಮತ್ತಿತರರು ಉಪಸ್ಥಿತರಿದ್ದರು.